ಶಿವಮೊಗ್ಗ: ವಿನೋಬನಗರದ ಕನಕನಗರದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನ.18 ರಿಂದ ನ.21
ರವರೆಗೆ 4 ದಿನಗಳ ಕಾಲ ಬೀರಪ್ಪ ದೇವರ ಭಂಡಾರ ಜಾತ್ರೆ ಆಯೋಜನೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ನಿರ್ದೇಶಕ ಸಿ.ಎಚ್. ಮಾಲತೇಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಭಂಡಾರ ಬೀಸುವುದು, ಭಜನಾ ಮಂಡಳಿ ಮಾತೆಯವರಿಂದ ಕನಕನಗರದ ಮುಖ್ಯ ರಸ್ತೆಯಲ್ಲಿ ಕನಕದಾಸರ ಕೀರ್ತನೆಗಳ ಗಾಯನ ನಡೆಯಲಿದೆ ಎಂದರು.
ಈ ಕಾರ್ಯಕ್ರಮವು ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಡೇದೇವರ ಮಠದÀ ಶ್ರೀ ಸ್ವಾಮಿ ಅಮೋಘಸಿದ್ದೇಶ್ವರ ನಂದರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.
ಅಂದು ಸಂಜೆ 5 ಗಂಟೆಗೆ ಸಂಕಷ್ಟಹರ ಚತುರ್ಥಿ ಮತ್ತು ಕಾರ್ತಿಕ ದೀಪೋತ್ಸವ, ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ.19 ರಂದು ನಡೆಯುವ ಕಾರ್ಯಕ್ರಮದಲ್ಲಿ ತಿಂಥಿಣಿ ಶಾಖಾ ಮಠದ ಕನಕಗುರು ಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ವಿನೋಬನಗರ ಶಿವಾಲಯದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಈ ವೇಳೆ ಗೌರಿಗದ್ದೆಯ ವಿನಯ್ ಗುರೂಜಿ ಅವಧೂತರು ಭಾಗಿಯಾಗಲಿದ್ದಾರೆ ಎಂದರು.
ಬೆಳಿಗ್ಗೆ 11 ಗಂಟೆಗೆ ಶ್ರೀಗಳಿಂದ ಜೋಗತಿಯರಿಗೆ ಮಡ್ಲಕ್ಕಿ (ಉಡಿತುಂಬುವ) ಕಾರ್ಯಕ್ರಮ ಮತ್ತು ಚೌಡಿಕೆಪದ, ಮದ್ಯಾಹ್ನ ಪ್ರಸಾದ ಅನ್ನದಾಸೋಹ ನಡೆಯಲಿದೆ. ಭಜನಾ ಪರಿಷತ್, ಶಿವಮೊಗ್ಗ ಮತ್ತು ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟದಿಂದ ಭಜನಾಮೃತ ಮತ್ತು ಹಾಲುಮತ ಮಹಾಸಭಾದ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ. 80 ರಷ್ಟು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ ಎಂದರು.
ನ.20 ಕ್ಕೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಗಣಹೋಮ, ರುದ್ರಹೋಮ, ಪ್ರಧಾನ ಹೋಮ, ಶಕ್ತಿಹೋಮ ಜಯಾಹೋಮ ಮತ್ತು ಮಹಾಮಂಗಳಾರತಿ ಬೆಳಿಗ್ಗೆ 10 ಗಂಟೆಗೆ ಹೊಸದುರ್ಗ ಶಾಖಾಮಠ ಈಶ್ವರಾನಂದಪುರಿ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಶಿವಾಲಯದಿಂದ ಸಮಸ್ತ ಭಕ್ತಾದಿಗಳು ಬುತ್ತಿಯೊಂದಿಗೆ ಮೆರವಣಿಗೆ ಮೂಲಕ ಶ್ರೀಗಳೊಂದಿಗೆ ಬೀರಪ್ಪನ ನೈವೇದ್ಯ ಸಮರ್ಪಣೆ, ಮಹಾಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಆಶೀರ್ವಚನ ಕಾರ್ಯಕ್ರಮ ಜರುಗಲಿದೆ ಎಂದರು.
ಸಂಜೆ 5 ರಂದು ಗೊರವಯ್ಯನವರಿಂದ ದೋಣಿ ಸೇವೆ, 7-30 ಕ್ಕೆ ವಿದ್ವಾನ್ ದತ್ತಮೂರ್ತಿ ಭಟ್ ತಂಡದಿಂದ ಕನಕದಾಸರ ಜೀವನ ಚರಿತ್ರೆ ಯಕ್ಷಗಾನ, ರಾತ್ರಿ 9 ಗಂಟೆಗೆ ದೇವಸ್ಥಾನದ ಸುತ್ತ ಬಲಿ ಸಮರ್ಪಣೆ ನಡೆಯಲಿದೆ. ನ.21ರಂದು ಪರಿವಾರ ದೇವತೆÀಗಳಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಮಧ್ಯಾಹ್ನ 3 ಗಂಟೆಗೆ ಡೊಳ್ಳು ವೀರಗಾಸೆ ಮತ್ತು ಮಂಗಳವಾದ್ಯದೊಂದಿಗೆ ನಗರದ ಗೋಪಿವೃತ್ತದಿಂದ ಜೈಲ್ ಸರ್ಕಲ್, ಲಕ್ಷ್ಮೀ ಚಲನಚಿತ್ರ ಮಂದಿರದ ಮೂಲಕ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ರಾಜಬೀದಿ ಉತ್ಸವ ನಡೆಯಲಿದೆ. ಈ ವೇಳೆ ಹಳದಿ ಬಾವುಟವನ್ನ ಭಕ್ತಾದಿಗಳು ಹಿಡಿದುಕೊಂಡು ಬರಲಿದ್ದಾರೆ ಎಂದು ತಿಳಿಸಿದರು.
ನವೀನ್ ಒಡೆಯರ್ ಮತ್ತು ಸಂಗಡಿಗರಿಂದ ಜಗದ್ಗುರು ರೇವಣಸಿದ್ದೇಶ್ವರ ಸ್ವಾಮಿಯ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ದಾಸೋಹ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಸಂಘದ ರಾಮಕೃಷ್ಣ ಮೂಡ್ಲಿ, ಸಮಿತಿಯ ಶರತ್ ಮರಿಯಪ್ಪ, ಹೆಚ್. ಪಾಲಾಕ್ಷಿ, ಎಸ್. ಜ್ಞಾನೇಶ್ವರ, ಸಿ. ಹೊನ್ನಪ್ಪ, ಎಸ್.ಪಿ. ಶೇಷಾದ್ರಿ, ನವುಲೆ ಈಶ್ವರಪ,್ಪ ವಾಟಾಳ್ ಮಂಜುನಾಥ್, ಕೆ.ಜಿ. ರಾಘವೇಂದ್ರ, ಬಾಬಣ್ಣ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.