ಭದ್ರಾವತಿ: ತಾಲೂಕಿನಲ್ಲಿರುವ ಅಂಗನವಾಡಿ ಕಟ್ಟಡಗಳ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯಿತಿ ಸದಸ್ಯರು ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌ರವರು ಇಲಾಖೆ ವರದಿ ಮಂಡಿಸಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಹೊಸದಾಗಿ ೨೬ ಅಂಗನವಾಡಿ ಕಟ್ಟಡಗಳ ಕಾಮಗಾರಿ ನಡೆಯುತ್ತಿದ್ದು, ಪ್ರಗತಿ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯರಾದ ಪ್ರೇಮ್‌ಕುಮಾರ್, ಅಣ್ಣಾಮಲೈ, ತಿಪ್ಪೇಶ್‌ರಾವ್ ಸೇರಿದಂತೆ ಇನ್ನಿತರರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಸದಸ್ಯರ ಗಮನಕ್ಕೆ ತರುತ್ತಿಲ್ಲ. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಕೊಡಿಸಲು ಮಾತ್ರ ನಾವು ಬೇಕು. ಉಳಿದಂತೆ ನಮ್ಮನ್ನು ಕಾಮಗಾರಿ ಆರಂಭ ಮಾಡುವಾಗ, ಕಾಮಗಾರಿ ಪರಿಶೀಲನೆ ನಡೆಸುವಾಗ ಹಾಗು ಪೂರ್ಣಗೊಂಡಾಗ ಯಾವ ಮಾಹಿತಿಯನ್ನು ನೀಡದೆ ಕಡೆಗಣಿಸಲಾಗುತ್ತಿದೆ. ನಾವು ಕಾಮಗಾರಿಗೆ ಸಂಬಂಧಿಸಿದಂತೆ ಕಮಿಷನ್ ಹಣ ಕೊಡಿ ಎಂದು ಕೇಳುತ್ತಿಲ್ಲ. ಇಲಾಖೆ ಅಧಿಕಾರಿಗಳು ನಮಗೆ ಕಾಮಗಾರಿ ಕುರಿತು ಮಾಹಿತಿ ನೀಡುವ ಜೊತೆಗೆ ಗೌರವದಿಂದ ವರ್ತಿಸಿ ಎಂದು ಕೇಳುತ್ತಿದ್ದೇವೆ. ಈ ಸಂಬಂಧ ಹಲವಾರು ಬಾರಿ ಸಭೆಯಲ್ಲಿ ಚರ್ಚಿಸಿದ್ದರೂ ಸಹ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ಲಕ್ಷ್ಯ ಧೋರಣೆಯಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಸೂಕ್ತ ಉತ್ತರ ನೀಡದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಅಧ್ಯಕ್ಷರು ಸಹ ಅಸಮದಾನ ವ್ಯಕ್ತಪಡಿಸಿ, ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ. ಸಭೆಗೆ ಬಂದಿರುವುದು ವರದಿ ನೀಡುವುದಕ್ಕೆ ಹೊರತು ರಾಜಕಾರಣ ಮಾಡುವುದಕ್ಕಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ ಎಂದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರಾದ ಪ್ರೇಮ್‌ಕುಮಾರ್ ಮತ್ತು ಕೆ. ಮಂಜುನಾಥ್‌ರವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಶುಲ್ಕ ವಸೂಲಾತಿ ಮಾಡುತ್ತಿವೆ. ಪ್ರಸ್ತಕ್ತ ಸಾಲಿನ ಶೈಕ್ಷಣಿಕ ಶಿಕ್ಷಣ ಆರಂಭಗೊಂಡಿಲ್ಲ. ಈಗಾಗಲೇ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅಲ್ಲದೆ ಸರ್ಕಾರದ ಮಾರ್ಗಸೂಚಿಯಂತೆ ಯಾವ ಖಾಸಗಿ ಶಾಲೆಗಳು ಸಹ ಶುಲ್ಕ ವಸೂಲಿ ಮಾಡುತ್ತಿಲ್ಲ. ಅಲ್ಲದೆ ಶಿಲ್ಕ ಮಾಹಿತಿಯನ್ನು ಸರ್ಕಾರದ ಸುತ್ತೋಲೆಯಂತೆ ಪ್ರಕಟಣಾ ಫಲಕಗಳಲ್ಲಿ ಪ್ರದರ್ಶಿಸುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ತಕ್ಷಣ ಗಮನಹರಿಸುವಂತೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಟಿ.ಟನ್ ಸೋಮಶೇಖರಯ್ಯ, ಈಗಾಗಲೇ ಸರ್ಕಾರದ ಸುತ್ತೋಲೆ ಖಾಸಗಿ ಶಾಲೆಗಳ ಗಮನಕ್ಕೆ ತರುವ ಮೂಲಕ ಎಚ್ಚರಿಸಲಾಗಿದೆ. ಉಳಿದಂತೆ ಮುಂದಿನ 4 ದಿನಗಳಲ್ಲಿ ಎಲ್ಲಾ ಖಾಸಗಿ ಶಾಲೆಗಳು ಶುಲ್ಕ ಮಾಹಿತಿಗೆ ಕುರಿತಂತೆ ಫಲಕಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗುವುದು ಎಂದರು.
ಇದೆ ಸಂದರ್ಭದಲ್ಲಿ ದೇವರನರಸೀಪುರ ಮುರಾರ್ಜಿದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಬಸವರಾಜಪ್ಪ ಮಾಹಿತಿ ನೀಡಿ, ವಸತಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಶಾಲೆಗಳನ್ನು ಆರಂಭಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು. ಇದೆ ಸಂದರ್ಭದಲ್ಲಿ ಆರ್ಎಎಫ್ ಸಿಬ್ಬಂದಿಗಳಿಗೆ ವಸತಿ ಶಾಲೆಯಲ್ಲಿ ಸುಮಾರು 1 ವರ್ಷದ ವರೆಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ಸಂಬಂಧ ಅಧ್ಯಕ್ಷೆ ಲಕ್ಷ್ಮೀದೇವಿ ತೀವ್ರ ಅಸಮಧಾನ ವ್ಯಕ್ತಪಡಿಸಿ ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಬಸವರಾಜಪ್ಪ, ಇಲಾಖೆಯ ಉನ್ನತ ಅಧಿಕಾರಿಗಳ ಆದೇಶದಂತೆ ಆರ್‌ಎಎಫ್ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಉಳಿದು ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಮಾಹಿತಿ ನೀಡಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದರು.
ಇದೆ ರೀತಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾಬಾಯಿ, ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು.