ಶಿವಮೊಗ್ಗ :-ಮಂಡ್ಯದಲ್ಲಿ ನಡೆಯಲಿರುವ 87 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಅಕ್ಟೋಬರ್ 26 ರಿಂದ 28 ರ ವರೆಗೆ ನಮ್ಮ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

        ಶಿವಮೊಗ್ಗ ಜಿಲ್ಲಾ ಆಡಳಿತ  ಪ್ರತಿ ತಾಲ್ಲೂಕು ಮತ್ತು ಗ್ರಾಮ, ಪಟ್ಟಣಕ್ಕೆ ಈ ರಥ ಆಗಮಿಸಿದಾಗ ಸ್ವಾಗತಿಸಿ ಮುಂದಿನ ಊರುಗಳಿಗೆ ಬೀಳ್ಕೋಡುವ ವಿಚಾರವಾಗಿ ಸಿದ್ದತೆ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರೆ ಕನ್ನಡ ಪರ ಸಂಘಟನೆಗಳ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

         ಮಾನ್ಯ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಪರಭಾರೆ ಜಿಲ್ಲಾಧಿಕಾರಿಗಳಾದ ಎನ್. ಹೇಮಂತ್ ಅವರ ನೇತೃತ್ವದಲ್ಲಿ, ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಭೂಮರೆಡ್ಡಿ ಅವರು, ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉಮೇಶ್ ಮತ್ತು  ಎಲ್ಲಾ ತಾಲ್ಲೂಕು ತಹಶಿಲ್ದಾರರು, ತಾಲ್ಲೂಕು ಪಂಚಾಯತ ಇ. ಓ. ಬಿ.ಇ.ಓ., ನಗರಸಭೆ, ಪಟ್ಟಣ ಪಂಚಾಯತಿ, ಪುರಸಭೆ ಅಧಿಕಾರಿಗಳು, ಕಸಾಪ, ಕಜಾಪ, ಕಸಾಸಾಂ ವೇದಿಕೆ ಪದಾಧಿಕಾರಿಗಳ ಒಳಗೊಂಡ ಆನ್ ಲೈನ್ ಸಭೆ ನಡೆಯಿತು. ಸಕಲ ಸಿದ್ದತೆಗಳು ನಡೆದಿವೆ.

        26 ರಂದು ಬೆಳಿಗ್ಗೆ 10-30 ಕ್ಕೆ ಶಿಕಾರಿಪುರಕ್ಕೆ ಆಗಮಿಸುವ ರಥ ಮೆರವಣಿಗೆ, ಕಾರ್ಯಕ್ರಮ ನಂತರ ಶಿರಾಳಕೊಪ್ಪಕ್ಕೆ 12-30 ಕ್ಕೆ ಆಗಮಿಸಲಿದೆ. ಸೊರಬಕ್ಕೆ ಮಧ್ಯಾಹ್ನ 02 ಗಂಟೆಗೆ ಆಗಮಿಸಲಿದೆ. ಸಂಜೆ 5 ಕ್ಕೆ ಉಳುವಿಗೆ ಆಗಮಿಸಲಿದೆ. ಸಂಜೆ 6 ಕ್ಕೆ ಸಾಗರಕ್ಕೆ ಆಗಮಿಸಲಿದೆ.

         ಸಾಗರದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ರಥ ಅಲ್ಲೇ ವಾಸ್ತವ್ಯ ಮಾಡಲಿದೆ.

         27 ರ ಬೆಳಿಗ್ಗೆ ಸಾಗರದಿಂದ ಹೊರಡುವ ರಥ ಬೆಳಿಗ್ಗೆ 10-30 ಕ್ಕೆ ಬಟ್ಟೆಮಲ್ಲಪ್ಪ ಗ್ರಾಮ ತಲುಪುವುದು. ಮಧ್ಯಾಹ್ನ 12-30 ಕ್ಕೆ ಹೊಸನಗರಕ್ಕೆ ಆಗಮಿಸಲಿದೆ. ಇಳಿಹೊತ್ತು 3 ಕ್ಕೆ ರಿಪ್ಪನ್ ಪೇಟೆಗೆ ಬರುವುದು. ಸಂಜೆ 4-30 ಕ್ಕೆ ಕೋಣಂದೂರಿಗೆ ಆಗಮಿಸಲಿದೆ. ಸಂಜೆ 6 ಕ್ಕೆ ತೀರ್ಥಹಳ್ಳಿ ತಲುಪಲಿದೆ. ಮೆರವಣಿಗೆ, ಗೋಪಾಲಗೌಡ ರಂಗಮಂದಿರದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಥದ ವಾಸ್ತವ್ಯ ತೀರ್ಥಹಳ್ಳಿಯಲ್ಲಿ.

          28 ರಂದು ಬೆಳಿಗ್ಗೆ ತೀರ್ಥಹಳ್ಳಿಯಿಂದ ನಿರ್ಗಮಿಸುವ ರಥ ಬೆಜ್ಜುವಳ್ಳಿಗೆ ಬೆಳಿಗ್ಗೆ 9-30 ಕ್ಕೆ ಆಗಮಿಸಲಿದೆ. 10-00 ಕ್ಕೆ ಮಂಡಗದ್ದೆ, 11 ಕ್ಕೆ ಗಾಜನೂರು ಮಾರ್ಗವಾಗಿ 11-30 ಕ್ಕೆ ಶಿವಮೊಗ್ಗ ನಗರ ತಲುಪಲಿದೆ.

         ಶಿವಮೊಗ್ಗ ಕೆ. ಎಸ್. ಆರ್. ಟಿ. ಸಿ. ಬಸ್ಸು ನಿಲ್ದಾಣದ ಎದುರು ರಥವನ್ನು ಬರಮಾಡಿಕೊಂಡು ನಗರದ ಎಲ್ಲಾ ಕನ್ನಡ ಮನಸ್ಸುಗಳ ಜೊತೆಯಲ್ಲಿ ರಾಜಬೀದಿ ಉತ್ಸವ ನಡೆಯಲಿದೆ. ಬಿ.ಎಚ್. ರಸ್ತೆ, ನೆಹರು ರಸ್ತೆ, ಬಾಲರಾಜ್ ಅರಸ್ ರಸ್ತೆ ಮಾರ್ಗವಾಗಿ ಕುವೆಂಪು ರಂಗಮಂದಿರ ತಲುಪಲಿದೆ. ಅಲ್ಲಿ ಸಭೆ ನಡೆಸಿದ ನಂತರ 3-30 ಕ್ಕೆ ಎಂ.ಆರ್.ಎಸ್. ವೃತ್ತ ಮೂಲಕ ಬೀಳ್ಕೊಡಲಾಗುವುದು.

       ಸಂಜೆ 4-30 ಕ್ಕೆ ಮಲವಗೊಪ್ಪ ತಲುಪಲಿದೆ. ಭದ್ರಾವತಿಗೆ ಸಂಜೆ 5-30 ಕ್ಕೆ ಪ್ರವೇಶ ಮಾಡಲಿದೆ. ಅಲ್ಲಿ ರಾಜಬೀದಿ ಉತ್ಸವದ ನಂತರ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಅಲ್ಲಿಯೇ ವಾಸ್ತವ್ಯ ಮಾಡಲಿದೆ. ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ.

        ನಮ್ಮ ಜಿಲ್ಲೆಯಲ್ಲಿ ಕನ್ನಡದ ರಥ ಸಂಚರಿಸುವಾಗ ಮಾನ್ಯ ಮಂತ್ರಿಗಳು, ಸಂಸದರು, ಶಾಸಕರು, ವಿಧಾನಪರಿಷತ್ತು ಸದಸ್ಯರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಕನ್ನಡ ಪರ ಸಂಘಟನೆಗಳು, ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಕರು, ಎಲ್ಲಾ ಕನ್ನಡ ಮನಸ್ಸುಗಳು ಭಾಗವಹಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!