ಶಿವಮೊಗ್ಗ: ನಮ್ಮ ನಡುವೆ ಅತಿಯಾಗಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಯುವ ಸಮೂಹ ಕಂಕಣ ಬದ್ದರಾಗಬೇಕಾದ ತುರ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರದಂತಹ ವಿಚಾರಗಳ ವಿರುದ್ಧ ಜಾಗೃತಿ ಮೂಡಿಸುವ ಸಪ್ತಾಹದಂತಹ ಅವಶ್ಯಕತೆ ನಿರ್ಮಾಣವಾಗಿರುವುದು ಬೇಸರದ ಸಂಗತಿ. ರಾಷ್ಟ್ರದ ಏಳ್ಗೆ, ಸಮಗ್ರತೆಯ ಸಂಸ್ಕೃತಿಗಾಗಿ ಭ್ರಷ್ಟಾಚಾರದ ನಿರ್ಮೂಲನೆಯ ಹೋರಾಟ ಅನಿರ್ವಾಯವಾಗಿದೆ.
ಜನಸಂಖ್ಯೆಯ ಆಧಾರದಲ್ಲಿ ಉದ್ಯೋಗ ಅವಕಾಶ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅದು ಸ್ಪರ್ಧಾತ್ಮಕ ವಾತಾವರಣವಾಗಿ ಬದಲಾಗಿ, ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಕನಿಷ್ಟ ವಿದ್ಯಾರ್ಹತೆಯಿದೆ, ಅದೇ ನಮ್ಮ ದೇಶದ ಕಾನೂನು ರೂಪಿಸುವಂತಹ ಜನಪ್ರತಿನಿಧಿಯಾಗಲು ಕನಿಷ್ಟ ವಿದ್ಯಾರ್ಹತೆ ನಿಗಧಿಯಾಗದಿರುವುದು ದುರಂತ.
ಭಷ್ಟಾಚಾರ ನಿರ್ಮೂಲನೆಗಾಗಿ ಲೋಕಾಯುಕ್ತ, ಕಾನೂನು ವಿಧೇಯಕಗಳಿದ್ದರು ಭ್ರಷ್ಟಾಚಾರವನ್ನು ಕನಿಷ್ಟ ಕಡಿಮೆ ಮಾಡಲು ಕೂಡ ಸಾಧ್ಯವಾಗಿಲ್ಲ. ಇದಕ್ಕೆಲ್ಲ ಕಾರಣ ಜನಸಾಮಾನ್ಯರ ಬೆಂಬಲದ ಕೊರತೆ. ಆದ್ಯತೆಗಳ ಆಧಾರದಲ್ಲಿ ನಮ್ಮ ವಾತಾವರಣ ಸೃಷ್ಟಿಯಾಗಲಿದೆ. ಭಷ್ಟಾಚಾರ ರಹಿತ ವಾತಾವರಣ ನಿರ್ಮಾಣ ನಮ್ಮ ಆದ್ಯತೆಯಾಗಲಿ ಎಂದು ಹೇಳಿದರು.
***********************************************
ಸಂಪೂರ್ಣ ಕನ್ನಡಮಯ ಭಾಷಣ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಜುನಾಥ ನಾಯಕ್ ಅವರು ತಮ್ಮ ಭಾಷಣದಲ್ಲಿ ಆಂಗ್ಲ ಪದಗಳ ಬಳಕೆಯಿಲ್ಲದೆಯೇ ಸಂಪೂರ್ಣ ಕನ್ನಡಮಯವಾಗಿ ಮಾತನಾಡಿದ್ದು ನೆರೆದಿದ್ದ ವಿದ್ಯಾರ್ಥಿಗಳ ಗಮನ ಸೆಳೆಯಿತು.
***********************************************
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಶಿಕ್ಷಣದ ಮೂಲಕ ಸಂತೃಪ್ತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಯುವ ಸಮೂಹದಲ್ಲಿ ಅಳವಡಿಸುವ ಮೂಲಕ ಭ್ರಷ್ಟಾಚಾರವನ್ನು ತಡೆಯಲು ಪ್ರಯತ್ನಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್.ಎಂ.ಎಸ್, ಭ್ರಷ್ಟಾಚಾರ ತಡೆ ಕಾಯ್ದೆ ಕುರಿತು ಲೋಕಾಯುಕ್ತ ಇನ್ಸ್ಪೆಕ್ಟರ್ ಎಚ್.ಎಸ್.ಸುರೇಶ್ ಮಾತನಾಡಿದರು.
ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಾಯುಕ್ತ ಪೋಲಿಸ್ ವರಿಷ್ಟಾಧಿಕಾರಿ ಮಂಜುನಾಥ ಚೌಧರಿ.ಎಂ.ಎಚ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಸ್ವಾಮಿ, ಎನ್ಇಎಸ್ ನಿರ್ದೇಶಕರಾದ ಎಂ.ಎಸ್.ಅನಂತದತ್ತಾ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಸಿ.ಶ್ರೀಕಾಂತ್, ಎಂಸಿಎ ವಿಭಾಗದ ನಿರ್ದೇಶಕರಾದ ಡಾ.ಹೇಮಂತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.