ಶಿವಮೊಗ್ಗ: ಕ್ರೀಡಾ ಕ್ಷೇತ್ರ ನಮಗೆ ದೈಹಿಕ ಮತ್ತು ಮಾನಸಿಕವಾಗಿ ಸ್ವಸ್ಥ್ಯವನ್ನು ಕೊಡುವಂತಹ ಕ್ಷೇತ್ರ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಅನುದಾನ ರಹಿತ ಶಾಲೆಗಳ ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲೆಗಳ ಅನುದಾನ ರಹಿತ ಶಿವಮೊಗ್ಗ ತಾಲ್ಲೂಕಿನ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಾವುದೇ ಒಂದು ಕೆಲಸ ಮಾಡಬೇಕಾದರೆ, ಮನಸ್ಸು ಸ್ವಾಸ್ಥ್ಯವಾಗಿದ್ದರೆ, ಎಂತಹ ಕೆಲಸ ಮಾಡಲು ಮನಸ್ಸು ಬರುತ್ತದೆ. ಹಾಗಾಗಿ ಆ ಮನಸ್ಸು ಸ್ವಾಸ್ಥ್ಯವಾಗಿ, ಆರೋಗ್ಯಕರವಾಗಿ ಇರಬೇಕಾದರೆ,ನಮಗೆ ಮುಖ್ಯವಾಗಿ ಬೇಕಾಗಿರುವುದು ಕ್ರೀಡೆ. ಮಕ್ಕಳೇ ತರಗತಿ ಮಧ್ಯದಲ್ಲಿರುವಂತಹ ಸಂತೋಷಕ್ಕೂ, ಹಾಗೂ ಆಟದ ಮೈದಾನದಲ್ಲಿರುವ ಸಂತೋಷಕ್ಕೂ ಅಜಗಜಾಂತರ ವ್ಯತ್ಯಾಸ ಕಾಣುತ್ತೇವೆ ಎಂದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್,ಟಿವಿ ಹಾವಳಿಯಿಂದ ಕ್ರೀಡೆಗೆ ಎಲ್ಲೋ ಒಂದು ರೀತಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಇದೆ ಎಂಬುದು ನನ್ನ ಭಾವನೆ. ಓದಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು, ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆ ಕೊಡಬೇಕು ಎಂದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನೂನ್ಯತೆಗಳಿಂದ ದೂರವಾಗಬಹುದು. ಹಾಗಾಗಿ ಪ್ರತಿದಿನ ವಿದ್ಯಾರ್ಥಿಗಳು ಅರ್ಧ ಗಂಟೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ, ಧೈರ್ಯ ವಂತರಾಗಲು ಕಾರಣವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಭಾವಂತರಾಗಿರುತ್ತಾರೆ. ಅಂತಹ ಪ್ರತಿಭೆಗಳನ್ನು ಹೊರಗೆ ತರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಶ್ರಮಪಟ್ಟು ಮುಂದೆ ಬರಬೇಕೆಂದರೆ, ತಾವೆಲ್ಲರೂ ಸತತ ತರಬೇತಿಯನ್ನು ಪಡೆದು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಆರ್.ಗಿರೀಶ್ ಮಾತನಾಡಿ,ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಗಳಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ತಾಲ್ಲೂಕು ದೈಹಿಕ ಶಿಕ್ಷಣಧಿಕಾರಿ ನಿರಂಜನ್ ಮೂರ್ತಿ, ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ,
ಬಿಜಿಎಸ್ ಗುರುಕುಲ ಶಾಲಾ ಮತ್ತು ಕಾಲೇಜಿನ ಪ್ರಾಚಾರ್ಯ ಎಚ್.ಎಚ್. ಸುರೇಶ್ ಇದ್ದರು.