ಶಿವಮೊಗ್ಗ ,ಸೆ.13:

ಹೊಸ ತಲೆಮಾರಿಗೆ ಅವಶ್ಯಕತೆಯಿರುವ ಸತ್ವಯುತ ಸಿನಿಮಾಗಳು ರೂಪಗೊಳ್ಳಲು ಇತಿಹಾಸದ ಸಿನಿಮಾಗಳು ಆಶಾಕಿರಣವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಿನಿಮಾ ವಸ್ತು ನೋಡುವ ಬಗೆ ಮತ್ತು ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಶಿಕ್ಷಣ ನೀಡುತ್ತಿದ್ದ ಅಂದಿನ ಸಿನಿಮಾಗಳು ಸದಾ ಸ್ಮರಣೀಯ. ತುಂಬು ಕುಟುಂಬದ ಅವಶ್ಯಕತೆ, ವ್ಯಕ್ತಿತ್ವ ವಿಕಸನ, ಸಮಾಜಕ್ಕೆ ಕೊಡುಗೆ ನೀಡುವಂತಹ ಪ್ರೇರಣೆ ನೀಡುತ್ತಿದ್ದ ಸಿನಿಮಾಗಳು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಂದು ಕುಟುಂಬ ಸಹಿತ ಸಿನಿಮಾಗಳು ನೋಡಲು ಮುಜುಗರವಾಗುವ ಸಂದರ್ಭ ಸೃಷ್ಟಿಯಾಗುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಅದ್ಭುತ ಕಲಾತ್ಮಕ ಸಿನಿಮಾಗಳನ್ನು ನೀಡುತ್ತ ಮೇರು ಸದೃಶ್ಯದ ವ್ಯಕ್ತಿತ್ವವಾಗಿ ರೂಪಗೊಂಡವರು ಗಿರೀಶ್ ಕಾಸರವಳ್ಳಿ. ಸತ್ವಯುತ ಸಿನಿಮಾಗಳು ರೂಪಿಸುವ ಅವಶ್ಯಕತೆಗಳಿಗೆ ನಮ್ಮ ಪೂರ್ವಿಕ ಸಿನಿಮಾ ನಿರ್ದೇಶಕರು ಕಲಾವಿದರು ಆಶಾಕಿರಣವಾಗಿ‌ ನಿಲ್ಲಲಿದ್ದಾರೆ.

ಇಂದು ಬಂದು ನಾಳೆ ಮಾಯವಾಗುವ ಸಿನಿಮಾಗಳೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಿದೆ. ಯಾರನ್ನು ನಮ್ಮ ನಾಯಕರನ್ನಾಗಿ, ಅಭಿಮಾನಿಯಾಗಿ ಹಿಂಬಾಲಿಸಬೇಕು ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.  ಯಕ್ಷಗಾನದ‌ ಮೂಲಕ ಸಾಮಾಜಿಕ‌ ಕ್ರಾಂತಿ ಗ್ರಾಮೀಣ ಭಾಗದಲ್ಲಿ ನಡೆಯುತ್ತಿತ್ತು. ಅಂತಹ ಕಲೆಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗುತ್ತಿರುವುದು ವಿಷಾದನೀಯ. 

ಸಿನಿಮಾ ಟಾಕೀಸ್ ಮಾಯವಾಗಿ ದೊಡ್ಡ ಮಾಲ್‌ಗಳಾಗಿವೆ. ಇತಿಹಾಸವನ್ನು ಅರಿಯದಾತ ಎಂದಿಗೂ ಭವಿಷ್ಯವನ್ನು ರೂಪಿಸಿಕೊಳ್ಳಲಾರ.‌ ಕಲಿಯುವ ವಿದ್ಯೆಯಲ್ಲಿ ಏರಿಳಿತವಾದರು ಪರವಾಗಿಲ್ಲ ಸಂಸ್ಕಾರ ಕಲಿಸುವಲ್ಲಿ ಏರಿಳಿತವಾಗದಿರಲಿ. ವಿದ್ಯೆ ಕಲಿತವರು ಭ್ರಷ್ಟರಾಗಬಹುದು, ಅದರೇ ಸಂಸ್ಕಾರ ಕಲಿತವರು ಎಂದೂ ದಾರಿ ತಪ್ಪುವುದಿಲ್ಲ ಎಂದು ಹೇಳಿದರು. ಅಂತಹ ಸಂಸ್ಕಾರ ನೀಡುವ ಸಿನಿಮಾಗಳನ್ನು ಅಧ್ಯಯನ ನಡೆಸಿ ಎಂದು ಹೇಳಿದರು.

ಸಿನಿಮೊಗೆ ಶಿವಮೊಗ್ಗ ಚಿತ್ರಸಮಾಜ  ಸಂಚಾಲಕ ಡಾ.ಹೆಚ್.ಎಸ್.ನಾಗಭೂಷಣ್ ಮಾತನಾಡಿ, ಸಿನಿಮಾ‌ ಶೈಕ್ಷಣಿಕ ಚೌಕಟ್ಟಿಗೆ ಬಂದಿದೆ. ಸಿನಿಮಾ ನೋಡುವ ಆನಂದಿಸುವ ಹೊರತಾಗಿ ಅಧ್ಯಯನ ನಡೆಸಬೇಕಾದ ಅವಶ್ಯಕತೆಯಿದೆ. ಅನೇಕ ಜನಪ್ರಿಯ ಸಿನಿಮಾಗಳು ಅಧ್ಯಯನ ಮತ್ತು ವಿಶ್ಲೇಷಣೆ ನಡೆಯುವುದೇ ಇಲ್ಲ. ತಂತ್ರಜ್ಞಾನದ ಒಳಗಿನ ಆತ್ಮದ ಜೊತೆಗೆ ಒಡನಾಟ‌ ಮಾಡುತ್ತ ಸಿನಿಮಾಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ‌ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜ ಸಂಚಾಲಕ ವೈದ್ಯನಾಥ.ಹೆಚ್.ಯು, ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಾಲಿನಿ, ಅಲ್ ಮೊಹಮದ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸೋಮಶೇಖರ್, ಕುವೆಂಪು ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಮಧು, ಸಂಯೋಜಕಿ ಡಾ.ಈ.ಲಾವಣ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಮತ್ತು ಕೂರ್ಮಾವತಾರ ಚಲನಚಿತ್ರಗಳು ಪ್ರದರ್ಶನಗೊಂಡಿತು. ಶನಿವಾರ ಈ ಸಿನಿಮಾದ ಕುರಿತು ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಯಲಿದೆ. 

By admin

ನಿಮ್ಮದೊಂದು ಉತ್ತರ

error: Content is protected !!