ಕೇಂದ್ರ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪರ್ಯಾಯ ಗಣರಾಜ್ಯೋತ್ಸವ ರ‍್ಯಾಲಿ
ಶಿವಮೊಗ್ಗ,ಜ.೨೬:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತ, ಕಾರ್ಮಿಕ ದಲಿತ ಐಕ್ಯ ಹೋರಾಟ ಸಮಿತಿ ವತಿಯಿಂದ ನೂರಾರು ಟ್ರ್ಯಾಕ್ಟರ್ ಮತ್ತು ವಾಹನಗಳ ಮೂಲಕ ಸೈನ್ಸ್ ಮೈದಾನದಿಂದ ಸರ್ಕಾರಿ ನೌಕರರ ಭವನದವರೆಗೆ  ಪರ್ಯಾಯ ಗಣರಾಜ್ಯೋತ್ಸವ ರ‍್ಯಾಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ರೈತ ನಾಯಕ ಕೆ.ಟಿ.ಗಂಗಾಧರ್ ಮಾತನಾಡಿ, ದೆಹಲಿಯಲ್ಲಿ ಲಕ್ಷ ಲಕ್ಷ ಜನ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ೨ ತಿಂಗಳಿಂದ ಪ್ರತಿಭಟನೆಯನ್ನು ಮಾಡುತ್ತಿದೆ. ಆದರೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಯಲ್ಲಿ ಈ ಕಾಯ್ದೆಗಳ ಸಾದಕ-ಬಾದಕಗಳ ಬಗ್ಗೆ ಚರ್ಚಿಸಿಲ್ಲ. ಈ ಕಾಯ್ದೆಯಿಂದ ಆಗುವ ಕೆಷ್ಟ ಪರಿಣಾಮಗಳ ಬಗ್ಗೆ ರೈತರ ಮತ್ತು ತಜ್ಞರ ಅಭಿಪ್ರಾಯವನ್ನು ಪಡೆದಿಲ್ಲ. ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಾ, ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವುದೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಕುಳಗಳಾದ ಅಂಬಾನಿ, ಅಧಾನಿಯವರ ಕೈಗೊಂಬೆಯಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ  ಅವರ ದಲ್ಲಾಳಿಯಾಗಿ ಕೃಷಿ ಕಾಯ್ದೆ ತಿದ್ದುಪಡಿ ರೈತರ ಹಿತಾಸಕ್ತಿಗಾಗಿಯೇ ಮಾಡಿದ್ದು ಎಂದು ಸುಳ್ಳುಗಳ ಸರಮಾಲೆಯನ್ನು ಮಾಧ್ಯಮಗಳ ಮೂಲಕ ಸರ್ಕಾರ ಹೇಳಿಸತೊಡಗಿದೆ.


ರೈತರಿಗೆ ಮೊದಲು ಅವರ ಉತ್ಪನ್ನಗಳಿಗೆ ನ್ಯಾಯವಾದ ಕನಿಷ್ಟ ಬೆಲೆ ನೀಡಿ, ಕೃಷಿ ನೀತಿಯನ್ನು ಕಾನೂನು ಮಾಡಿ, ಸರ್ಕಾರದ ನಿಯಂತ್ರಣದಡಿಯಲ್ಲಿದ್ದ ಎಪಿಎಂಸಿ ಅಸ್ತಿತ್ವವನ್ನು ಬುಡಮೇಲು ಮಾಡುವ ಈ ಕೃಷಿ ಕಾಯ್ದೆ ತಿದ್ದುಪಡಿಯನ್ನು ಕೈಬಿಡಿ ಎಂದು ಒತ್ತಾಯಿಸಿದರು.
ಉದ್ಯೋಗ ಭದ್ರತೆ, ಆಹಾರ ಭದ್ರತೆ, ಒದಗಿಸಬೇಕು. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದು ರೈತರಿಗೆ ಮಾರಕವಾಗಿದ್ದು, ಇದನ್ನು ಕೈಬಿಡಬೇಕು. ಪಶ್ಚಿಮ ಘಟ್ಟಗಳ ರಕ್ಷಣೆಯ ನೆಪದಲ್ಲಿ ಜಾರಿಗೆ ತಂದಿರುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಬಾರದು. ಅಕೇಶಿಯ ಬೆಳೆಸಲು ಎಂಪಿಎಂಗೆ ಲೀಸ್ ಕೊಡಲಾಗಿದ್ದು ಭೂಮಿಯನ್ನು ಖಾಸಗಿಯವರಿಗೆ ನೀಡಬಾರದು. ಭತ್ತ ಮತ್ತು ಜೋಳದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ರಾಜನಂದಿನಿ, ಎಂ. ಗುರುಮೂರ್ತಿ, ಕೆ.ಪಿ.ಶ್ರೀಪಾಲ್, ಕಲ್ಗೋಡು ರತ್ನಾಕರ್, ಆರ್, ಪ್ರಸನ್ನಕುಮಾರ್, ಕೆ.ಬಿ.ಪ್ರಸನ್ನಕುಮಾರ್, ಮಲ್ಲಿಕಾರ್ಜುನ್, ಶಿವಾನಂದ್ ಕುಗ್ವೆ, ರಮೇಶ್ ಹೆಗ್ಡೆ, ಗೋ.ರಮೇಶ್ ಗೌಡ, ಬಿ.ಆರ್. ಜಯಂತ್,   ಹೆಚ್.ಸಿ.ಯೋಗೀಶ್, ಜಿ.ಡಿ. ಮಂಜುನಾಥ್, ದೇವೇಂದ್ರಪ್ಪ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ರೈತ ಮುಖಂಡರಿದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!