ಶಿವಮೊಗ್ಗ: ನಾಡಹಬ್ಬ ದಸರಾ ಶಿವಮೊಗ್ಗ ನಗರದಲ್ಲಿ ವಿಜೃಂಭಣೆಯಿಂದ ಪ್ರತಿವರ್ಷವೂ ನಡೆಯುತ್ತಾ ಬಂದಿದ್ದು ಈ ವರ್ಷವೂ ವಿಜೃಂಭಣೆಯಿಂದ ನಡೆಸಲು ಪೂರ್ವಭಾವಿ ತಯಾರಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೀಶ್ ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆಯಿಂದ ಪ್ರತಿವರ್ಷ ಅದ್ಧೂರಿ ದಸರಾ ಹಬ್ಬವನ್ನು 9 ದಿನಗಳ ಕಾಲ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾಜಿಕ ಕಳಕಳಿಯುಳ್ಳ ಹಾಗೂ ಸಾಂಸ್ಕøತಿಕ ಸೇರಿದಂತೆ 14 ರೀತಿಯ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕುಮಟ್ಟದ ಸ್ಥಳೀಯ ಕಲಾವಿದರನ್ನೊಳಗೊಂಡ ಕಾರ್ಯಕ್ರಮಗಳನ್ನು ಶಿವಮೊಗ್ಗ ನಗರದಾದ್ಯಂತ 9 ದಿನಗಳ ಕಾಲ ಆಚರಿಸಿಕೊಂಡು ಬರಲಾಗುತ್ತಿದೆ.
ಶಿವಮೊಗ್ಗ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಲಂಕಾರ ಮಾಡುತ್ತಿದ್ದು, ಪ್ರಮುಖವಾಗಿ ವಿಜಯದಶಮಿ ದಿನದಂದು ಆನೆ ಮೇಲೆ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹ ಕೂರಿಸಿ ನಗರದ ಅರಮನೆ ಎದುರು ನಂದಿ ಪೂಜೆ ಸಲ್ಲಿಸುವ ಮುಖಾಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿಕೊಂಡು ಅಲ್ಲಮಪ್ರಭು ಮೈದಾನ ತಲುಪಿ ನಂತರ ತಹಶೀಲ್ದಾರ್ ಅವರು ಅಂಬು ಛೇದನ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ಪಾಲಿಕೆಯ ಮೇಯರ್ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಿ ಪಾಲಿಕೆ ಎಲ್ಲಾ ಸದಸ್ಯರನ್ನೊಳಗೊಂಡು ಮತ್ತು ಪಾಲಿಕೆ ಅಧಿಕಾರಿಗಳು ಜೊತೆಯಾಗಿ ಕಾರ್ಯಕ್ಮದ ರೂಪುರೇಷೆ ಸಿದ್ಧಗೊಳಿಸಲಾಗುತ್ತದೆ. ಪಾಲಿಕೆ ಅವಧಿ ಮುಕ್ತಾಯಗೊಂಡಿರುವುದರಿಂದ ಪಾಲಿಕೆ ಆಯುಕ್ತರನ್ನು 2024ರ ದಸರಾ ಹಬ್ಬದ ಅಧ್ಯಕ್ಷರನ್ನಾಗಿ ನೇಮಿಸಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿಕೊಂಡು ಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ನಡೆಸಲು ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಆರ್.ಸಿ. ನಾಯ್ಕ್, ಧೀರರಾಜ್ ಹೊನ್ನವಿಲೆ, ಎಂ.ಎನ್. ಶಿವಕುಮಾರ್, ಯಮುನಾ ರಂಗೇಗೌಡ, ಶಾಮೀರ್ ಖಾನ್, ಆಸೀಫ್, ಪ್ರಭಾಕರ್ ಹಾಗೂ ಇನ್ನಿತರರು ಇದ್ದರು.