ಶಿವಮೊಗ್ಗ: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲೂ ಸಿದ್ಧ. ಬಿಜೆಪಿಯೊಂದಿಗೆ ಮೈತ್ರಿಗೂ ಬದ್ಧ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದುಕೊಂಡ ಹಾಗೆ ಆದರೆ ನಗರದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುವ ವಾತಾವರಣ ಇದೆ. ಚುನಾವಣಾ ಆಯೋಗವೂ ಇತ್ತೀಚೆಗೆ ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಮತದಾರರ ಪಟ್ಟಿ ಹೊಸದಾಗಿ ಸಿದ್ಧಪಡಿಸುತ್ತಿದ್ದು, ಅ. 9 ರಂದು ಅಂತಿಮ ಮತದಾರರ ಪಟ್ಟಿ ಹೊರಬೀಳುವ ಮಾಹಿತಿ ಇದೆ ಎಂದರು.

ಪಾಲಿಕೆಯ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು 10 ತಿಂಗಳಾಗಿದ್ದು, ಕಂದಾಯ ಕಟ್ಟಿದ ಸಾರ್ವಜನಿಕರು ಸಮಸ್ಯೆಗಳಿಂದ ತತ್ತರಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಪಾಲಿಕೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ. ಚುನಾವಣಾ ಆಯೋಗದ ಆಯುಕ್ತರು ಪಾಲಿಕೆಗೆ ಚುನಾವಣೆ ನಡೆಸಲು ತೀರ್ಮಾನಿಸಿರುವುದರಿಂದ ಸಾರ್ವಜನಿಕರು ಸ್ವಾಗತಿಸಿದ್ದು, ಕೂಡಲೇ ಚುನಾವಣೆ ನಡೆಸುವಂತೆ ಆಯೋಗಕ್ಕೆ ಒತ್ತಾಯಿಸಿದರು.

ಜೆಡಿಎಸ್ ಪಕ್ಷದಿಂದ ಎಲ್ಲಾ ವಾರ್ಡ್ಗಳಲ್ಲೂ ಸ್ಪರ್ಧಿಸಲು ಸಿದ್ಧತೆಗಳು ನಡೆಯುತ್ತಿವೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಒಂದು ವೇಳೆ ಮೈತ್ರಿಯಾದಲ್ಲಿ ಅದಕ್ಕೂ ಸಿದ್ಧವಾಗಿದ್ದೇವೆ. ಇಲ್ಲದಿದ್ದಲ್ಲಿ ಪಕ್ಷದಿಂದ ಎಲ್ಲಾ ವಾರ್ಡ್ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, ಮಹಾನಗರ ಪಾಲಿಕೆ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಆ. 29ರ ನಾಳೆ ಬೆಳಗ್ಗೆ 11 ಗಂಟೆಗೆ ವಾರ್ಡ್ ನಂ. 18ರ ವಿನೋಬನಗರದ ಕಂಚಿಕಾಮಾಕ್ಷಿ ನಗರದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಚಾಲನೆ ನೀಡಲಾಗುವುದು. ನಗರದ ಪ್ರತಿ ಬೂತ್ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಕಾರ್ಯ ನಡೆಯಲಿದ್ದು, 30 ಸಾವಿರ ಹೊಸ ಸದಸ್ಯರನ್ನು ನೋಂದಣಿ ಗುರಿ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಅಬ್ದುಲ್ ವಾಜೀದ್, ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ಸಿದ್ದಪ್ಪ, ಹೆಚ್.ಎಂ. ಸಂಗಯ್ಯ, ವಿನಯ್, ಗೋಪಿ, ಮಾಧವಮೂರ್ತಿ, ಜಯಣ್ಣ, ರಘು ಬಾಲರಾಜ್, ಶ್ಯಾಮ್, ಸಂಜಯ್ ಕಶ್ಯಪ್, ಲಕ್ಷ್ಮಿ ನರಸಿಂಹಮೂರ್ತಿ ಮೊದಲಾದವರಿದ್ದರು.