ಸಾಗರ : ಕೊಪ್ಪಳ ಜಿಲ್ಲೆ ಸಿಂಗನೂರು ಗ್ರಾಮದಲ್ಲಿ ದಲಿತ ಯುವಕನನ್ನು ಬರ್ಬರ ಹತ್ಯೆಗೈದ ಕ್ಷೌರಿಕನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ರಸ್ತೆತಡೆದು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿ ತಾಲ್ಲೂಕು ಸಂಚಾಲಕ ನಾಗರಾಜ್, ಕೊಪ್ಪಳ ಜಿಲ್ಲೆಯ ಸಿಂಗನೂರು ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪ ಈರಪ್ಪ ಬಂಡಿಯಾಳ್ ಎಂಬಾತ ಕ್ಷೌರ ಮಾಡಿಸಿಕೊಳ್ಳಲು ಕ್ಷೌರಿಕನ ಅಂಗಡಿಗೆ ಹೋಗಿದ್ದಾಗ ಈರಪ್ಪ ಎಂಬಾತ ಕ್ಷೌರ ಮಾಡಲು ನಿರಾಕರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದಿದೆ. ಕ್ಷೌರಿಕ ಈರಪ್ಪ ತನ್ನ ಹಡಪದಿಂದ ಯಮನೂರಪ್ಪ ಅವರನ್ನು ಬರ್ಬರವಾಗಿ ಹತ್ಯೆ
ಮಾಡಿದ್ದಾನೆ. ದಲಿತ ಎನ್ನುವ ಕಾರಣ ನೀಡಿ ಕ್ಷೌರ ಮಾಡಲು ನಿರಾಕರಿಸುವ ಜೊತೆಗೆ ಹತ್ಯೆ ನಡೆಸಿರುವ ಕೃತ್ಯವನ್ನು ದಲಿತ ಸಂಘರ್ಷ ಸಮಿತಿ ತೀವೃವಾಗಿ ಖಂಡಿಸುತ್ತದೆ. ತಕ್ಷಣ ಜಾತಿ ನಿಂದನೆ ಮಾಡಿ ಯಮನೂರಪ್ಪ ಅವರನ್ನು ಹತ್ಯೆ ಮಾಡಿರುವ ಈರಪ್ಪ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಯಮನೂರಪ್ಪ ಕುಟುಂಬಕ್ಕೆ ರಾಜ್ಯ ಸರ್ಕಾರ ೧ ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಎಲ್.ಚಂದ್ರಪ್ಪ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದೆ. ದಲಿತ ಎನ್ನುವ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿ, ಜಾತಿನಿಂದನೆ ಮಾಡಿ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಪೋಷಣೆ ಮಾಡುವ ಕೆಲಸ ಈರಪ್ಪ ಮಾಡಿದ್ದಾನೆ.
ಆತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಯಮನೂರಪ್ಪ ಕುಟುಂಬಕ್ಕೆ ೧ ಕೋಟಿ ರೂ. ಪರಿಹಾರ ನೀಡುವ ಜೊತೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಕುಗ್ವೆ, ಶಿವಪ್ಪ ಗುಡ್ಡೆಕೌತಿ, ರಾಮಣ್ಣ ಹಸಲರು, ರಂಗಪ್ಪ ಹೊನ್ನೆಸರ, ನಾರಾಯಣ ಅರಮನೆಕೇರಿ, ನಾರಾಯಣ ಗೋಳಗೋಡು, ಲಕ್ಷ್ಮಮ್ಮ ಹಿರೇಮನೆ, ಈರೇಶ್, ಮುರುಗೇಶ್, ದೇವರಾಜ್, ರವಿ ಜಂಬಗಾರು, ಈಶ್ವರ್ ಇನ್ನಿತರರು ಹಾಜರಿದ್ದರು.