ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ ಟ್ರಸ್ಟ್ ಸಹಯೋಗದಲ್ಲಿ ಆಗಸ್ಟ್ 21 ನೆಯ ಬುಧವಾರ ಸಂಜೆ 6 ಕ್ಕೆ ವಿಶ್ವ ಜಾನಪದ ದಿನಾಚರಣೆ ಮತ್ತು
ಶ್ರಾವಣ ಚಿಂತನ ಕಾರ್ಯಕ್ರಮ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಮೂರು ದಿನಗಳಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ಕಲಿಕಾ ಶಿಬಿರ ನಡೆಯುತ್ತಿದ್ದು ಬುಧವಾರ ಸಂಜೆ ಶಿಬಿರದಲ್ಲಿ ಕಲಿತ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಆನಂದಪುರ ಶ್ರೀ ಬೆಕ್ಕಿನಕಲ್ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಅವರನ್ನು ಅಭಿನಂದಿಸಲಾಗುವುದು. ಮುಖ್ಯ ಅತಿಥಿಗಳಾಗಿ ಶಿಕಾರಿಪುರ ನಾಗರಾಜಗೌಡರು, ಹೃದಯ ರೋಗ ತಜ್ಞರು, ಚಾಲುಕ್ಯ ನಗರದ ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವಾಧ್ಯಕ್ಷರಾದ ಡಾ. ಬಾಲಸುಬ್ರಹ್ಮಣ್ಯ ಆರ್ ಅವರು ಭಾಗವಹಿಸಲಿದ್ದಾರೆ.
ಜನಪದ ಕಲೆಯನ್ನು ಕಲಿಸಿದ ಹೊನ್ನಾವರ ಕರ್ಕಿಯ ಗಣಪುಬಡವಗೌಡ, ಚನ್ನರಾಯಪಟ್ಟಣದ ಎಂ. ಜಿ. ಮಂಜೇಗೌಡ, ಹಾಡು ಕಲಿಸಿದ ನಳಿನಾಕ್ಷಿ, ಸುಶೀಲಾ ಷಣ್ಮುಗಂ ಅವರು ಉಪಸ್ಥಿತ ರಿರುತ್ತಾರೆ ಎಂದು ಡಿ. ಮಂಜುನಾಥ ತಿಳಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದ್ದಾರೆ.