ಶಿವಮೊಗ್ಗ: ಪ್ರಾರಂಭದಿಂದಲೂ ಗುಡ್‌ಲಕ್ ಆರೈಕೆ ಕೇಂದ್ರದ ಸೇವೆಯು ಶ್ಲಾಘನೀಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಆಲ್ಕೋಳದ ಗಜಾನನ ಲೇಔಟ್ ನಲ್ಲಿ ನಿರ್ಮಿಸಿರುವ ಗುಡ್‌ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯಿಂದ ನಿರಂತರವಾಗಿ ಸೇವಾ ಕಾರ್ಯ ಮುಂದುವರೆಯಲಿ ಎಂದು ಆಶಿಸಿದರು.
ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಉತ್ತಮ ಸಂಸ್ಕಾರವನ್ನು ಹೊಂದಿ ಬೆಳೆಯುವ ಮಕ್ಕಳು ತಮ್ಮ ತಂದೆ ತಾಯಿಯರನ್ನು ಇಂತಹ ಕೇಂದ್ರಗಳಿಗೆ ತಂದು ಬಿಡದೆ ತಾವೇ ಅವರ ಪೋಷಣೆ ಮಾಡಬೇಕು. ಇಂತಹ ಕೇಂದ್ರಗಳ ಸಂಖ್ಯೆ ಕಡಿಮೆಯಾಗಬೇಕು. ಇಲ್ಲಿ ದಾಖಲಾಗುವವರ ಸಂಖ್ಯೆಯು ಕಡಿಮೆಯಾಗಲಿ ಎಂದು ತಿಳಿಸಿದರು.
ವಾಗ್ಮಿ ಜಿ.ಎಸ್.ನಟೇಶ್ ಮಾತನಾಡಿ, ನಾವು ದುಡಿಯುವ ನೂರು ರೂಪಾಯಿಯಲ್ಲಿ ಸ್ವಲ್ಪ ಹಣವನ್ನು ಸಮಾಜಸೇವೆಗಾಗಿ ಎತ್ತಿಡಬೇಕು. ಇದರಿಂದ ಪುಣ್ಯದ ಕೆಲಸ ಮಾಡಿದ ಸಾರ್ಥಕ ಭಾವನೆ, ಸಂತೃಪ್ತಿ ನಮಗೆ ದೊರೆಯುತ್ತದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡಕ್ಕೆ ಇನ್ನು ಹೆಚ್ಚಿನ ಸವಲತ್ತುಗಳ ಅವಶ್ಯಕತೆ ಇದ್ದು, ಎಲ್ಲರೂ ಇದಕ್ಕೆ ಒಳ್ಳೆಯ ಮನಸ್ಸಿನಿಂದ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರ ನಡೆದು ಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಗುಡ್ ಲಕ್ ಆರೈಕೆ ಕೇಂದ್ರಕ್ಕೆ ವಿವಿಧ ರೂಪದಲ್ಲಿ ದಾನ ನೀಡಿದಂತಹ ದಾನಿಗಳನ್ನು ಸನ್ಮಾನಿಸಲಾಯಿತು.
ಗುಡ್ ಲಕ್ ಆರೈಕೆ ಕೇಂದ್ರದ ಬೈರಾಪುರದ ಶಿವಪ್ಪಗೌಡ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ಟಿ.ಶ್ರೀನಿವಾಸ್, ಎಂ.ಎ.ಕೃಷ್ಣಪ್ಪ, ಎಚ್.ರಾಮಲಿಂಗಪ್ಪ, ವಸಂತ ಹೋಬಳಿದಾರ್, ಗಜಾನನ ಗೌಡ, ಜಿ.ವಿಜಯಮಾರ್, ಆನಂದರಾವ್, ಅನುಪಮಾ ಹೆಗಡೆ, ವಿ.ಜಿ.ಲಕ್ಷ್ಮೀನಾರಾಯಣ, ಗಾಯತ್ರಿ ಹೆಗಡೆ, ಜೆ.ಕೆ.ಶರವಣ, ಸರ್ಜಾ ಜಗದೀಶ್, ವಿನಯ್ ಕುಮಾರ್, ಕೆ.ಇ.ಕಾಂತೇಶ್, ನಾರಾಯಣ ಉಪಸ್ಥಿತರಿದ್ದರು.