ಶಿವಮೊಗ್ಗ,ಆ.೧೦: ಸರ್ಕಾರದ ಆದೇಶವಿರದೇ ಹಾಗೂ ನೋಟೀಸ್ ನೀಡದೇ ಶಿವಮೊಗ್ಗ ತಾಲ್ಲೂಕಿನ ಆಲದೇವರ ಹೊಸೂರು ಗ್ರಾಮದ ಚೇತನಗೌಡ ಎಂಬುವರ ಜಮೀನಿಗೆ ನುಗ್ಗಿ ಬೇಲಿ ಕಿತ್ತು ಜೆಸಿಬಿ ಯಿಂದ ತೆಂಗಿನಮರಗಳನ್ನು ದ್ವಂಸ ಮಾಡಿರುವ ಇದನ್ನು ಪ್ರಶ್ನಿಸಿದ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಅಧ್ಯಕ್ಷ ತಿ.ನಾ.ಶ್ರೀನಿವಾಸ್ ಒತ್ತಾಯಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಲೆ ಮಾಡುತ್ತಿದ್ದರು. ಇದನ್ನು ನೋಡಿಕೊಂಡು ಜನಪ್ರತಿನಿಧಿಗಳು ಪಲಾಯನ ಮಾಡುತ್ತಿದ್ದಾರೆ ಎಂದು ದೂರಿದರು.


ಜಿಲ್ಲೆಯ ಹಲವು ಕಡೆ ಅರಣ್ಯ ಇಲಾಖೆಯವರು ರೈತರಿಗೆ ನೋಟೀಸ್ ನೀಡದೇ ಜಮೀನುಗಳ ಒತ್ತುವರಿಯನ್ನು ಏಕಾಏಕಿ ತೆರವುಗೊಳಿಸುತ್ತಿದ್ದಾರೆ. ರೈತ ಚೇತನಗೌಡರವರ ಬಳಿ ಕಾನೂನು ಪರ ದಾಖಲೆಗಳಿದ್ದರೂ ಸಹ ಜಮೀನಿಗೆ ನುಗ್ಗಿ ಧ್ವಂಸ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೇ ಎಂದರು.


ಚೇತನಗೌಡ ಅವರ ಆಲದೇವರ ಹೊಸೂರು ಗ್ರಾಮದ ಸರ್ವೆ ನಂ.೧೧೭, ಹಳೆ ಸರ್ವೆ ನಂ. ೨೭ರ ಬ್ಲಾಕ್ ನಂ. ೩ರಲ್ಲಿ ಎರಡು ಎಕರೆ ಜಮೀನಿದ್ದು, ಈ ಜಮೀನನ್ನು ೨೦೨೨ರ ಜುಲೈನಲ್ಲಿ ಕ್ರಯಕ್ಕೆ ಪಾರ್ವತಮ್ಮ ಕೋಂ ಓಂಕಾರಪ್ಪ ಇವರಿಂದ ಖರೀದಿಸಿರುತ್ತಾರೆ. ಇವರಿಗೆ ಸದರಿ ಜಮೀನು ೧೯೭೬ರಲ್ಲಿ ಸರ್ಕಾರದಿಂದ ಮಂಜೂರಾಗಿರುತ್ತದೆ. ಖರೀದಿಸಿದ ಜಮೀನಿನಲ್ಲಿ ಸುತ್ತಲು ತಂತಿ ಬೇಲಿ ನಿರ್ಮಿಸಿಕೊಂಡು

ತೆಂಗಿನಗಿಡಗಳನ್ನು ಬೆಳೆಸಿದ್ದಾರೆ. ನೆನ್ನೆ ಯಾವುದೇ ನೋಟೀಸ್ ನೀಡದೇ ಅರಣ್ಯ ಇಲಾಖೆಯವರು ಜಮೀನಿಗೆ ನುಗ್ಗಿ ಕಲ್ಲುಕಂಬಗಳನ್ನು ಕಿತ್ತಿದ್ದು, ಜಮೀನಿನ ದಾಖಲೆ ತೋರಿಸಿದರು ಸಹ ಜೆಸಿಬಿ ಮೂಲಕ ತೆಂಗಿನಗಿಡಗಳನ್ನು ಕಿತ್ತು ಟ್ರಂಚ್ ತೆಗೆಯಲಾಗಿದೆ. ಇದನ್ನು ತಡೆಯಲು ಹೋದ ಚೇತನಗೌಡರ ಮೇಲೆ ಆರ್.ಎಫ್.ಓ. ಗುರುರಾಜ್ ಹಾಗೂ ಸಿಬ್ಬಂದಿಗಳು ಹಲ್ಲೆ ಮಾಡಿ ಜೆಸಿಬಿಯನ್ನು ಅವರ ಮೇಲೆ ಹತ್ತಿಸಲು ಹೋಗಿ ಜೀವಬೆದರಿಕೆ ಆಗಿದ್ದಾರೆ ಎಂದು ದೂರಿದರು.


ಜಮೀನಿನ ಮಾಲಿಕ ಚೇತನ್‌ಗೌಡ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಆಗಿರುವ ನಷ್ಟವನ್ನು ತುಂಬಿಸಿ ಅವರಿಗೆ ಜೀವ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ಆ.೧೩ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ಕೃಷ್ಣಪ್ಪ, ಮಂಜಪ್ಪ, ದಿನೇಶ್ ಕುಮಾರ್, ಮಹಾದೇವ ಸಿದ್ದರಗುಡಿ, ಮೂರ್ತಿ, ಎಂ.ಚೇತನ್, ನಾಗರಾಜ ನಾಯಕ್, ವೆಂಕಟಚಲ ಗೌಡ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!