ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ ಐದನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ.ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ.

ವಿಶೇಷವಾಗಿ ಸೋಮವಾರಗಳಂದು ಈಶ್ವರನಿಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರಾವಣ ಸೋಮವಾರದಂದು ನಡೆಯುವ ಶಿವಪೂಜೆಗೆ ವಿಶೇಷ ಮಹತ್ವವಿದೆ.

ಶ್ರಾವಣ ತಿಂಗಳಲ್ಲಿ ಬರುವ ಸೋಮವಾರಗಳೂ ಸಹ ಉಪವಾಸವಿದ್ದು, ಶ್ರಾವಣ ಮಾಸವನ್ನು ಆಚರಿಸುವ ಪದ್ಧತಿ ಹಲವೆಡೆ ಇದ್ದು, ಈ ರೀತಿ ಮಾಡುವುದರಿಂದ ಮನಸ್ಸಿನ ಸಂಕಷ್ಟಗಳು ಈಡೇರುತ್ತವೆ ಎಂದು ಹೇಳಲಾಗುತ್ತೆ. ಶ್ರಾವಣಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದಷ್ಟೇ ಅಲ್ಲದೆ ಮಂಗಳವಾರದಂದು ಪಾರ್ವತಿ ದೇವಿಯನ್ನು ಆರಾಧಿಸುವ, ಮಂಗಳ ಗೌರಿ ವ್ರತಾಚರಣೆ ಇರುವುದು ಶ್ರಾವಣಮಾಸದ ಮತ್ತೊಂದು ವಿಶೇಷವಾಗಿದೆ.

ಶ್ರಾವಣ ಮಾಸ ಪವಿತ್ರ ಮಾಸ :– ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು, ವರ್ಷಪೂರ್ತಿ ಇರುವ ಹಲವು ಹಬ್ಬಗಳಲ್ಲಿ ಹೆಚ್ಚಿನ ಹಬ್ಬಗಳು ಈ ತಿಂಗಳಲ್ಲೇ ಬರುತ್ತವೆ, ಈ ತಿಂಗಳಲ್ಲಿ ಆಧ್ಯಾತ್ಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತೆ, ಶ್ರಾವಣದಲ್ಲಿ ಏನೇ ಮಾಡಿದರು ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ ಎನ್ನಲಾಗಿದೆ. ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ ಪಾರ್ವತಿಗೆ ಮೀಸಲು.

ಶ್ರಾವಣ ಎಂದರೇನು?, ತಿಂಗಳಲ್ಲೇ ಹೆಚ್ಚಾಗಿ ಸಾಲು ಸಾಲು ಧಾರ್ಮಿಕ ಪೂಜೆ,ಹಬ್ಬ — ಹರಿದಿನಗಳು ಬರುತ್ತವೆ,ಜೊತೆಗೆ ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತವಾಗಿದೆ. ಆಷಾಢ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರವಣ ಎನ್ನುವ ನಕ್ಷತ್ರ ಆಕಾಶವನ್ನು ಆಳುತ್ತದೆ. ಆದ್ದರಿಂದ ಈ ಮಾಸವನ್ನು ಶ್ರಾವಣ ಮಾಸ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸುವುದು ಎಂದರ್ಥ,ಹೀಗಾಗಿ ಈ ಶ್ರಾವಣಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶಿವನ ಕುರಿತಾದ ಸ್ತೋತ್ರ,
ಪಠನೆ, ಧ್ಯಾನ ಮಾಡಬೇಕು.
ಶಿವನ ಆರಾಧನೆ :- ಶ್ರಾವಣಮಾಸದಲ್ಲಿ ಹೆಚ್ಚು ಶಿವನ ಆರಾಧನೆ ನಡೆಯುವುದಕ್ಕೆ ಹಿನ್ನೆಲೆ ಇದ್ದು, ಸುರ ಅಸುರರು ಸೇರಿ ನಡೆಸಿದ ಸಮುದ್ರ ಮಂಥನದ ಕಥೆಯೊಂದಿಗೆ ಬೆಸೆದುಕೊಂಡಿದೆ, ಸಮುದ್ರ ಮಂಥನದ ವೇಳೆ ವಿಷ ಹೊರ ಬಂದಾಗ ಅದನ್ನು ಶಿವ ಸೇವಿಸಿ ಲೋಕಕ್ಕೆ ಎದುರಾಗಿದ್ದ ಕಂಟಕವನ್ನು ನಿವಾರಿಸುತ್ತಾನೆ. ಈ ಘಟನೆ ನಡೆದಿದ್ದು ಶ್ರಾವಣಮಾಸದಲ್ಲಿ ಆದ್ದರಿಂದ ಈ ಮಾಸವನ್ನು ಶಿವನಿಗೆ ಸಮರ್ಪಿಸಿ ಆರಾಧಿಸಲಾಗುತ್ತದೆ ಎಂಬ ನಂಬಿಕೆ ಇದೆ.

ಪರಮ ಶಕ್ತಿಯನ್ನು ಪಡೆದ ಹರ —ಹರಿಗೆ ಈ ಮಾಸವು ಮೀಸಲಾಗಿದೆ,ಅಲ್ಲದೆ ದೇವಿಯ ಅವತಾರವಾದ ತುಳಿಸಿ,ಗೌರಿ,ಲಕ್ಷ್ಮಿ ಎಲ್ಲರಿಗೂ ವಿಶೇಷ ಪೂಜೆ ಹಾಗೂ ವ್ರತವನ್ನು ಕೈಗೊಳ್ಳುವುದು ವಿವಿಧ ಬಗೆಯ ಪುಷ್ಪ ಫಲಗಳನ್ನು ಅರ್ಪಿಸುವುದರ ಮೂಲಕ ಭಕ್ತಿಯನ್ನು ಜನರು ಮೆರೆಯುತ್ತಾರೆ.

ಮನೆಯ ಎಲ್ಲರೂ ಸಂತೋಷದಿಂದ ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತಾ, ದೇವಾನು ದೇವತೆಗಳಿಗೆ ಅರ್ಪಿಸುವುದರ ಮೂಲಕ ವಿವಿಧ ಹಬ್ಬ ಹಾಗೂ ವ್ರತವನ್ನು ಮಾಡುತ್ತಾರೆ. ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ ಹಾಗೂ ಶ್ರಾವಣ ಶನಿವಾರಗಳನ್ನು ವಿಶೇಷ ದಿನಗಳನ್ನಾಗಿ ಆಚರಿಸುತ್ತಾರೆ.ಈ ದಿನಗಳಲ್ಲಿ ಸುಮಂಗಲಿಯರು ಉಪವಾಸ ಕೈಗೊಳ್ಳುವುದರ ಮೂಲಕ ಮನೆ ಯಜಮಾನ, ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೂ ಒಳಿತಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ಸದಾ ತುಂಬಿರಲಿ ಎಂದು ಬೇಡಿಕೊಳ್ಳುತ್ತಾರೆ .
ಅವರು ನಡೆಸುವ ವ್ರತ ಹಾಗೂ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ ಶ್ರಾವಣಮಾಸದಲ್ಲಿ ಬಹುತೇಕ ಮಂದಿ ಉಪವಾಸವನ್ನು ಕೈಗೊಳ್ಳುತ್ತಾರೆ.ಕೆಲವರು ತಿಂಗಳಲ್ಲಿ ಒಂದೇ ಊಟವನ್ನು ಮಾಡುವರು ಇದ್ದಾರೆ.ವಿಶೇಷ ವಾರಗಳ ವ್ರತದೊಂದಿಗೆ ಏಕಾದಶಿ,ಚತುರ್ಥಿ, ಹುಣ್ಣಿಮೆ ಹೇಳಿದಂತೆ ಇನ್ನಿತರ ದಿನಗಳ ಕುರಿತಾಗಿಯೂ ಉಪಾಸವನ್ನು ಕೈಗೊಳ್ಳುತ್ತಾರೆ.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.