ಸಾಗರ : ಡೇಂಗ್ಯೂ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಡೇಂಗ್ಯೂ ಉಲ್ಬಣಗೊಂಡ ಮೇಲೆ ಎಚ್ಚೆತ್ತು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ದೂರಿದ್ದಾರೆ.


ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಡೇಂಗ್ಯೂ ವಿರುದ್ದ ಸಮರೋಪಾದಿಯ ಪರಿಹಾರ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿ ಅವರು ಮಾತನಾಡುತ್ತಿದ್ದರು.


ರಾಜ್ಯದಲ್ಲಿ ೧೨ಸಾವಿರಕ್ಕೂ ಅಧಿಕ ಡೇಂಗ್ಯೂ ಪ್ರಕರಣ ದಾಖಲಾಗಿದ್ದು, ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಿದೆ. ಆದರೆ ಸರ್ಕಾರ ಡೇಂಗ್ಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಹೋಗಿರುವುದು ದುರದೃಷ್ಟಕರ. ವೈದ್ಯಕೀಯ ವ್ಯವಸ್ಥೆ ಜೊತೆಗೆ ಅಗತ್ಯವಾದ ಔಷಧಿ ಮಾತ್ರೆಗಳನ್ನು ಸರ್ಕಾರ ಪೂರೈಕೆ ಮಾಡಬೇಕು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಡೇಂಗ್ಯೂ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.


ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಡೇಂಗ್ಯೂಪೀಡಿತರು ಹೆಚ್ಚು ಬರುತ್ತಿದ್ದು ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಮುಖ್ಯವಾಗಿ ಬೆಡ್ ವ್ಯವಸ್ಥೆ ಇಲ್ಲವಾಗಿದೆ. ಹಿಂದೆ ಕೊರೋನಾ ಸಂದರ್ಭದಲ್ಲಿ ಖಾಸಗಿ ನರ್ಸಿಂಗ್ ಹೋಂ, ಲಾಡ್ಜ್‌ಗಳನ್ನು ವಶಕ್ಕೆ ತೆಗೆದುಕೊಂಡು ರೋಗಿಗಳಿಗೆ ನಾವು ತೊಂದರೆಯಾಗದಂತೆ ನೋಡಿ ಕೊಂಡಿದ್ದೇವು. ಡೇಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಬೇಕು ಎಂದು ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದರು.


ಸಾಗರ ನಗರವ್ಯಾಪ್ತಿಯಲ್ಲಿ ಡೇಂಗ್ಯೂ ಸಂಬಂಧ ನಗರಸಭೆ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಹಿಂದೆ ಬಿದ್ದಿದೆ. ಲಾರ್ವಾ ಸರ್ವೇ ಮೂಲಕ ನಿಯಂತ್ರಣ ಮಾಡಲು ಔಷಧಿ ಸಿಂಪಡಣೆಯನ್ನು ಹೆಚ್ಚಿಸಬೇಕು. ಡೇಂಗ್ಯೂ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಸಹ ನಗರಸಭೆ ಮತ್ತು ಆರೋಗ್ಯ ಇಲಾಖೆ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಬಿಜೆಪಿ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಗಣೇಶಪ್ರಸಾದ್, ದೇವೇಂದ್ರಪ್ಪ ಯಲಕುಂದ್ಲಿ, ಭಾವನಾ ಸಂತೊಷ್, ಹರೀಶ್, ಕೃಷ್ಣ ಶೇಟ್, ಜಗನ್ನಾಥ್ ಶೇಟ್, ರಾಜೇಂದ್ರ ಪೈ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!