ವಾರದ ಅಂಕಣ-3
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಮನುಷ್ಯ ಸಂಘಜೀವಿ ಎಂಬುದೇನೋ ನಿಜ. ಆದರೆ ಇಂದಿನ ಕೆಲವೇ ಕೆಲವು ಮನಸ್ಸುಗಳನ್ನು ಅರಿತುಕೊಳ್ಳಲು ಯಾರೇ ಆಗಿರಲಿ ಅವರನ್ನ ತುಂಬಾ ಹಚ್ಕೋಬೇಡ್ರಿ. ಇಷ್ಟೊಂದು ಖಾರವಾದ ನೆಗೆಟಿವ್ ಯೋಚನೆ ಯಾಕೆ ಗೊತ್ತಾ? ಈ ಸಮಾಜದ ಎಲ್ಲ ಮುಖಗಳಲ್ಲಿ ನಮ್ಮ ನಮ್ಮ ಶತ್ರುಗಳು ನಮ್ಮ ನಮ್ಮ ಮಗ್ಗುದಲ್ಲೇ ನಮಗೆ ಅಂಟಿಕೊಂಡಿರುತ್ತಾರೆ.
ಈ ಸತ್ಯದ ಸಂಗತಿಗಳು ಇಂದು ಕಣ್ಣಿಗೆ ಕಂಡಾಗ ಇಂತಹ ಮಾತು ಇಲ್ಲಿ ಅನಿವಾರ್ಯವಾಗುತ್ತದೆ. ಇಲ್ಲವೇ ಯಾವುದೇ ಅಪರಾಧ, ಸಾಮಾಜಿಕ ಲೋಕದ ನೋವುಗಳನ್ನು ಎಳೆ ಎಳೆಯಾಗಿ ಬಿಡಿಸಿ ನೋಡಿದಾಗ ಬಹುತೇಕ ಎಲ್ಲೆಡೆ ಆಯಾ ಅಕ್ಕಪಕ್ಕದವರೇ ಇದಕ್ಕೆ ಕಾರಣರಾಗಿರುತ್ತಾರೆ.
ಯಾರಾದರೂ ನಿಮ್ಮನ್ನು ಹಾಡಿ ಹೊಗಳಿದರೆ ನೀವು ಆಕಾಶದಲ್ಲಿ ಹಾರಾಡಬೇಡಿ. ನಿಮ್ಮನ್ನು ಹೊಗಳುತ್ತಿದ್ದಾರೆ ಎಂದರೆ ಪಕ್ಕದಲ್ಲಿಯೇ ಒಂದು ಪಟಾಕಿ ಬತ್ತಿ ಇಟ್ಟಿದ್ದಾರೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ. ಇತ್ತೀಚಿನ ಸಾಕಷ್ಟು ಅಪರಾಧ ಪ್ರಕರಣಗಳಲ್ಲಿ ನಾವು ಈ ಅಂಶವನ್ನು ಅತ್ಯಂತ ಸೂಕ್ಷ್ಮವಾಗಿ ನೋಡ ಬೇಕಾಗಿರುವುದು ಅನಿವಾರ್ಯವಾಗಿದೆ.
ಏನೆ ಆಗಿರಲಿ ಯಾರೇ ಆಗಿರಲಿ ಅವರು ಎಂತಹವರೇ ಆಗಿರಲಿ ಅವರ ಬಗ್ಗೆ ನಿಮಗೆ ಎಂಥದೇ ಪ್ರೀತಿ, ಅನುಕಂಪ, ಕನಿಕರ, ಅಕ್ಕರೆ ಏನೇ ಇರಲಿ ಅವರನ್ನು ತುಂಬಾ ಹಚ್ಚಿಕೊಳ್ಳಬೇಡಿ. ತಲೆಯ ಮೇಲೆ ಕೂರಿಸಿಕೊಳ್ಳಬೇಡಿ. ತಲೆ ಸವರುವಂತೆ ಮಾಡಿ ತಲೆಗೆ ಬಾರಿಸಿ ನಿಮ್ಮನ್ನು ಬರಿದಾದ ಬೆತ್ತಲೆಯನ್ನಾಗಿ ಮಾಡುವುದು ಇಂದಿನ ಸಮಾಜದ ಬಹುತೇಕ ಚಟುವಟಿಕೆಗಳಲ್ಲಿ ಕಾಣದಂತೆ ಕೆಲಸ ಮಾಡುತ್ತದೆ.
ಸ್ನೇಹ, ವಿಶ್ವಾಸ, ಪ್ರೀತಿ ಎಂತಹುದೇ ಇರಲಿ, ಅದರ ನಡುವೆ ನಿಮ್ಮದೊಂದು ‘ಅಂತರ’ವಿರಲಿ. ಇಲ್ಲಿ ವಯೋಸಹಜ ಆಸೆ ಆಕಾಂಕ್ಷಿಗಳು ಸಹ ನಿಮ್ಮನ್ನು ನಿಮ್ಮಷ್ಟಕ್ಕೆ ಇರಲು ಬಿಡುವುದಿಲ್ಲ. ನಿಮ್ಮನ್ನು ನಾನಾ “ತುಡಿತ”ಗಳಿಗೆ ಬಲಿಯಾಗುವಂತೆ ಮಾಡುವುದು ಇಂದಿನ ಈ ಸಮಾಜದ ಕಣ್ಣಿಗೆ ಕಾಣದ ಕಟು ಸತ್ಯ.
ಎಲ್ಲವನ್ನು ನಾವು ಈ ರೀತಿ ಯೋಚಿಸುವುದು ತಪ್ಪು. ಯಾವುದೋ ಅಥವಾ ಯಾರೋ ಒಂದಿಬ್ಬರ ಘಟನೆಗಳಲ್ಲಿ ಅಕ್ಕಪಕ್ಕದವರು, ಆತ್ಮೀಯರೆನಿಕೊಂಡವರು ಕೈಕೊಟ್ಟಿರುತ್ತಾರೆ. ಇಲ್ಲವೇ ಹಾಡಿ ಹೊಗಳಿ ಹಳ್ಳಕ್ಕೆ ಬೀಳಿಸಿರುತ್ತಾರೆ. ಎಲ್ಲವನ್ನು ನೆಗೆಟಿವ್ ಯೋಚನೆ ಲಹರಿಯಲ್ಲಿ ಚಿಂತಿಸುವುದು ತಪ್ಪು ಎನ್ನುವುದಾದರೂ ಸಹ ಅದನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಸದಾ ಎಡುತ್ತಿರುವುದು ಅತ್ಯಂತ ಗಂಭೀರ ವಿಷಯ.
ಈ ನೆಗೆಟಿವ್ ಅಂದರೆ ಋಣಾತ್ಮಕ ಮನಸ್ಸಿನ ಭಾವನೆ ಮೂಡಲು ಕಾರಣ ನಮ್ಮ ನಡುವಿನ ನೂರಾರು, ಸಾವಿರಾರು, ಲಕ್ಷಾಂತರ ಘಟನೆಗಳು ನಮಗೆ ಸಮಾಜದ ಅನುಭವಜನ್ಯ ಮಾಹಿತಿಯನ್ನು ನೀಡುತ್ತಿವೆ. ಆಗ ಇಲ್ಲಿ ನಾವು ಘಟನೆಯನ್ನಷ್ಟೇ ಅವಲೋಕಿಸುತ್ತೇವೆ, ಘಟನೆಯ ಹಿಂದಿನ ಯೋಚನೆ, ಆದ ಉದ್ದೇಶ ಹಾಗೂ ಪರಿಸ್ಥಿತಿಯನ್ನು ಮನದ ಮೂಲೆಯಲ್ಲಿ ಪ್ರಶ್ನಿಸದೆ ಇರುವುದು, ಪ್ರಶ್ನಿಸಿಕೊಳ್ಳದೆ ಇರುವುದು ನಮ್ಮ ನಡುವಿನ ನಮ್ಮೊಳಗಿನ ಒಂದು ಪ್ರಶ್ನೆ.
ಸದಾ ನಮ್ಮ ಚಿಂತನೆ ಸಕಾರಾತ್ಮಕವಾಗಿರಬೇಕು ಎಲ್ಲವನ್ನು ತೀರಾ ತಲೆಗೆ ಹಚ್ಚಿಕೊಳ್ಳಬಾರದು ಎಂಬುದು ಸತ್ಯ. ನಾವಿಲ್ಲಿ ತಲೆಗೆ ಹಚ್ಚಿಕೊಳ್ಳಬೇಕಾಗಿರುವುದು ನಮ್ಮ ನಡುವಿನ ನಮ್ಮೊಳಗಿನ ಋಣಾತ್ಮಕ ಮನಸುಗಳ ಆಟೋಟಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅತ್ಯಂತ ಸುಲಭವಾಗಿ ಇದು ಯಾವ ಕಣ್ಣಿಗೂ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ನಡುವಿನ ನಮ್ಮೊಳಗಿನ ನೆಗೆಟೀವ್ ಯೋಚನೆಯಿಂದ ಎಂಬುದನ್ನು ನಾವಿಲ್ಲಿ ಪರಿಗಣಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಬೆಟ್ಟದಷ್ಟು ಇರುವ ಸಮಸ್ಯೆಯನ್ನು ಅತ್ಯಂತ ಸುಲಭವಾಗಿ ಬಗೆಹರಿಸುವ ಆತ್ಮೀಯರನ್ನು. ಅಕ್ಕಪಕ್ಕದವರನ್ನು ನಂಬದಿದ್ದರೆ ಹೇಗೆ ಎಂದು ಒಂದು ಮನಸ್ಸು ಹೇಳುತ್ತಿದ್ದರೂ ಸಹ ನಿಮ್ಮನ್ನು ಅಂದರೆ ನಮ್ಮನ್ನು ಮಾತುಗಳ ಮೊನುಚುಗಳಲ್ಲಿ ಬಂಧಿಯನ್ನಾಗಿಸಿ, ಇಲ್ಲದ ಆಸೆಗಳನ್ನು ಹುಟ್ಟಿಸಿ ನಮ್ಮ ಮನೋಸ್ಥಿತಿಯನ್ನು ನಮಗೆ ವಿಚಿತ್ರವಾಗಿ ರೂಪಿಸುವಂತಹ ಕೆಲ ವಿಕೃತ ಮನಸ್ಸುಗಳು ನಮ್ಮ ಮಗ್ಗುಲಲ್ಲೇ ಇರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇಲ್ಲಿ ಹಣದ ಲೆಕ್ಕಾಚಾರವನ್ನು ಹಿಡಿದು ಒಂದಿಷ್ಟು ಅವಲೋಕನ ಮಾಡಿದಾಗ ಮೊದಲು ‘ನಾಯಿಮರಿ”ಯಂತೆ ಕಾಡಿಬೇಡಿ ಪಡೆದ ನಂತರ ಅದೊಂದು ಲೆಕ್ಕಕ್ಕಿಲ್ಲದ ವಿಷಯದಂತೆ ಇರುತ್ತಾನೆ ಎಂದರೆ ಅದು ನಮ್ಮೊಳಗಿನ, ನಮ್ಮ ಮಗ್ಗುಲ ವಿಕೃತತೆ ಅಲ್ಲವೇ? ನಾವು ಕೇವಲ ಕೊಡು ಕೊಳ್ಳುವಿಕೆ ಸೀಮಿತತೆಯಲ್ಲಿ ಇಂದಿನ ಸಮಾಜದ ಕಾಲಘಟ್ಟವನ್ನು ಅವಲೋಕನ ಮಾಡುವುದು ಅತ್ಯಂತ ಕಷ್ಟ. ಆದರೆ ಆ ಕಷ್ಟ ಬರುವ ಮುನ್ನ ನಮ್ಮಷ್ಟಕ್ಕೆ ನಾವು ಇರುವುದು ಒಳ್ಳೆಯದು. ಯಾರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಜೊತೆಯಾಗಿಟ್ಟುಕೊಂಡರೆ ಸಾಕು. ಇದು ಎಲ್ಲಾ ಸಂಬಂಧಗಳಲ್ಲಿ ನಮ್ಮ ನಡುವೆ ಭದ್ರವಾಗಿ ಬೇಕಾಗಿರುವುದು ಇಂದಿನ ಕೆಲವೇ ಕೆಲವು ವಿಕೃತ ಮನಸ್ಸುಗಳ ಮಧ್ಯೆ ನಡೆಯುತ್ತಿರುವ ಅತಿ ಹೆಚ್ಚು ಪ್ರಮಾಣದ ತೊಳಲಾಟದ ಘಟನೆಗಳಿಗೆ ಕಾರಣವಾಗಿದೆ ಎಂಬುದನ್ನು ಅವಲೋಕಿಸಬೇಕು.
ಅದು ಯಾರೇ ಆಗಿರಲಿ ಎಂತದೇ ಆಗಿರಲಿ ಎಷ್ಟೇ ಆಗಿರಲಿ ನಮ್ಮಷ್ಟಕ್ಕೆ ನಾವಿರುವುದು ಕಷ್ಟ. ಆದರೆ ಯಾರನ್ನೇ ಆಗಲಿ ಯಾವುದಕ್ಕೆ ಆಗಲಿ ತೀರಾ ಹಚ್ಚಿಕೊಳ್ಳಬಾರದು. ಯಾರನ್ನು ಯಾರೂ ಅನಿವಾರ್ಯ ಎಂದುಕೊಳ್ಳಬಾರದು. ಬದುಕ ದಾರಿ ಸಾಗುತ್ತಿದೆ.
ನಮ್ಮ ನಡುವಿನ ನಮ್ಮೊಳಗಿರುವ ಒಳ್ಳೆಯ ಮನಸ್ಸು ಸಾಯದಂತೆ ನೋಡಿಕೊಳ್ಳಲು ನಮ್ಮಲ್ಲಿ ಒಂದಿಷ್ಟು ಆತ್ಮಾವಲೋಕನ ಚಿಂತನೆ ಅತ್ಯಗತ್ಯ.