ಶಿವಮೊಗ್ಗ,ಜೂ.14: ಮೈಸೂರು ರಂಗಾಯಣದಿಂದ ಜೂ.16ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ “ಗೋರ್‍ಮಾಟಿ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗನಿರ್ದೇಶಕ ಹಾಲಸ್ವಾಮಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋರ್‍ಮಾಟಿ ನಾಟಕವು ಬಂಜಾರ ಜನಾಂಗದ ಕಲೆ, ಸಂಸ್ಕøತಿ, ಬದುಕು ಬವಣೆಗಳಿಗೆ ಕನ್ನಡಿ ಹಿಡಿಯುವ ನಾಟಕ ಇದಾಗಿದೆ. ಶಿವಮೊಗ್ಗದ ನೇಟಿವ್ ಥಿಯೇಟರ್ ಸಂಸ್ಥೆ ಈ ನಾಟಕವನ್ನು ಆಯೋಜನೆ ಮಾಡಿದ್ದು, ಜಿಲ್ಲಾ ಬಂಜಾರ ಸಂಘ ಇನ್ನಿತರ ಸಂಘಟನೆಗಳು ಸಹಕಾರ ನೀಡಿವೆ ಎಂದರು.

ಕಾಲಚಕ್ರದಲ್ಲಿ ಸಿಲುಕಿ ನುಜ್ಜುಗುಜ್ಜಾದ ಅನೇಕ ಜನಸಮುದಾಯಗಳಲ್ಲಿ ಬಂಜಾರ ಜನಾಂಗವೂ ಕೂಡ ಸೇರಿದೆ. ‘ಗೋರ್ಮಾಟಿ’ ಎಂದರೆ ನಮ್ಮವರು ಎನ್ನುವ ಒಳಗೊಳ್ಳುವಿಕೆಯ ಅರ್ಥದ ಹಿನ್ನಲೆಯಲ್ಲಿ ಬಳಸಲಾಗಿದ್ದು, ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸಂಸ್ಕೃತಿಯನ್ನು ಹೊಂದಿರುವ ಜನಸಮುದಾಯ. ಕಾಡು, ಬೆಟ್ಟ, ನೀರು ಇರುವ ಪ್ರದೇಶಗಳಲ್ಲಿ ತಾಂಡಗಳಾಗಿವೆ ಎಂದರು.

ಈ ಜನಸಮುದಾಯಗಳ ಮರುವ್ಯಾಖ್ಯಾನ ಮಾಡುವ ಅನಿವಾರ್ಯತೆ ಉಂಟಾಗಿದೆ. ಇಡೀ ದೇಶದ ಅನೇಕ ರಾಜ್ಯಗಳಲ್ಲಿ ಬೇರೆ ಬೇರ ಜಾತಿ ಸ್ವರೂಪದಲ್ಲಿ ಹರಿದು ಹಂಚಿ ಹೋಗಿರುವ ಬಂಜಾರರು ಭಾರತ ದೇಶ ಮರೆತ ಮಕ್ಕಳು. ವಸಾಹತು ಪೂರ್ವಕಾಲದಲ್ಲಿ ಎತ್ತುಗಳ ಮೇಲೆ ಉಪ್ಪು, ದಿನಸಿ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಬುಡಕಟ್ಟು ಇದ್ದಕ್ಕಿದ್ದಂತೆ ತೆರೆ ಮರೆಯಾದ್ದದ್ದ ಹೇಗೆ?. ಇವರ ಇತಿಹಾಸ, ಬಲಿದಾನ ಯಾಕೆ ನೆನಪಾಗುವುದಿಲ್ಲ?. ಈ ಎಲ್ಲಾ ಸವಾಲುಗಳ ಹುಡುಕಾಟವೇ ‘ಗೋರ್ಮಾಟಿ’ ನಾಟಕ ಇದಾಗಿದೆ ಎಂದರು.

‘ಗೋರ್ಮಾಟಿ’ ರೂಪಕದಲ್ಲಿ ಶಾಂತಾನಾಯಕ ಕಾದಂಬರಿ ‘ಗೋರ್ಮಾಟಿ’ಯ ಕೆಲವು ಅಧ್ಯಾಯಗಳನ್ನು ಬಿ.ಟಿ. ಲಲಿತನಾಯಕ್ರವರ ‘ತಾಂಡಾಯಣ’ ಮತ್ತು ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ, ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಯಲಾಗಿದೆ.

ಬಂಜಾರರು ವ್ಯಾಪಾರಿಗಳಾಗಿ, ಪಶು ಸಂಗೋಪನಾ ಪಾಲಕರಾಗಿ, ಕೃಷಿ ಕಾರ್ಮಿಕರಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಗುಪ್ತಚರರಾಗಿ, ಶ್ರಮಜೀವಿಗಳಾಗಿ ತಮ್ಮದೇ ವಿಶಿಷ್ಟ ಸಾಂಸ್ಕೃತಿಕ ಆಚರಣೆ, ಸಂಪ್ರದಾಯ, ಉಡುಗೆ ತೊಡುಗೆಯಿಂದ ಜಗತ್ತಿನ ಗಮನ ಸೆಳೆಯುವ ಬಂಜಾರ ಸಮುದಾಯ ಭಾರತೀಯ ಮುಖ್ಯವಾಹಿನಿಗೆ ಬರಲು ಇನ್ನೂ ಹೆಣಗಾಡುತ್ತಿದೆ. ಅವರ ದುಃಖದುಮ್ಮಾನಗಳಿಗೆ ಕಲೆ ಸಂಸ್ಕೃತಿ ಅಭಿವ್ಯಕ್ತಿಯ ಪ್ರಕ್ರಿಯೆ ಈ ರಂಗಪ್ರಯೋಗ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್‍ನಾಯ್ಕ, ಸೈಯ್ಯದ್ ಅಲಿಂ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!