ಶಿವಮೊಗ್ಗ ಜೂ.
ಪ್ರಜಾಪ್ರಭುತ್ವದ ಅತಿ ದೊಡ್ಡ ಜವಾಬ್ದಾರಿ ಹಾಗೂ ದೊಡ್ಡ ಹಬ್ಬ ಚುನಾವಣೆ. ಇಂತಹ ಚುನಾವಣೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ರಾಜ್ಯದಲ್ಲಿಯೇ 2 ನೇ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿದ ಜಿಲ್ಲೆಯಾಗಿ ಹೊರಹೊಮ್ಮಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ವಂದಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜೂ.07 ರಂದು ಆಯೋಜಿಸಲಾಗಿದ್ದಿ ಸ್ವೀಪ್ ಕಾರ್ಯಕ್ರಮಗಳ ಕುರಿತಾದ ಜಿಲ್ಲಾ ಮಟ್ಟದ ವರದಿ ಸಲ್ಲಿಕೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗaಳ ಮಾರ್ಗದರ್ಶನ ಹಾಗೂ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೊಗದೊಂದಿಗೆ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಇಡೀ ವಿಶ್ವದಲ್ಲಿಯೇ ಒಂದೇ ಬಾರಿಗೆ ಇಷ್ಟು ದೊಡ್ಡ ಚುನಾವಣೆ ನಡೆಯುವುದು ನಮ್ಮ ದೇಶದಲ್ಲಿ. ಪ್ರತಿ ನಾಗರೀಕರ ಧ್ವನಿಯನ್ನು ಪ್ರತಿನಿಧಿಸುವ ವ್ಯವಸ್ಥೆ ಚುನಾವಣೆ. ಇಂತಹ ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆ ಇಲ್ಲದೇ ಹೋದರೆ ಅದೊಂದು ಸೋಲು. ಚುನಾವಣೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಆದ್ದರಿಂದಲೇ ಸ್ವೀಪ್ ಸಮಿತಿಗಳ ಮೂಲಕ ವಿವಿಧ ರೀತಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿದೆ. ಈ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯವರಿಗೆ ತುಂಬು ಹೃದಯದ ಧನ್ಯವಾದಗಳು ಮತ್ತು ಅಭಿನಂದನೆಗಳು ಎಂದರು.
ತೀರ್ಥಹಳ್ಳಿ ಇಓ ಶೈಲಾ ಅವರು ಸ್ವೀಪ್ ಚಟುವಟಿಗಳ ಕುರಿತು ವರದಿ ಸಲ್ಲಿಸಿ, ತೀರ್ಥಹಳ್ಳಿ ತಾಲ್ಲೂಕು ಸ್ವೀಪ್ ಸಮಿತಿಯಿಂದ 38 ಗ್ರಾಮ ಪಂಚಾಯತಿಗಳಲ್ಲಿ ವಿಶಿಷ್ಟವಾದ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಯಕ್ಷಗಾನ ಕಲಾವಿದರ ಮೂಲಕ ಪಟ್ಟಣದಲ್ಲಿ ವಿವಿಧ ಕಲಾಮೇಳದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಮನೆ,ಮಂದಿರ,ಮಸೀದಿ, ಚರ್ಚ್‍ಗಳಲ್ಲಿ ಮತದಾನ ಜಾಗೃತಿ ಹಾಗೂ ವಿವಿಧ ಹಬ್ಬ ಆಚರಣೆಗಳಲ್ಲಿ, ಜಾತ್ರೆಗಳಲ್ಲಿ ಮತದಾನ ಜಾಗೃತಿ ಮೂಡಿಲಾಯಿತು. ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿಯಲ್ಲಿ ಗೀತೆ ಗಾಯನ ,ವಿಡಿಯೋ ಚಿತ್ರೀಕರಣವನ್ನು ಸಹ ಮಾಡಿ ತಾಲೂಕಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವಿಭಿನ್ನವಾಗಿ ಛಾಪು ಮೂಡಿಸಿದ್ದೇವೆ.
ಜಿಲ್ಲೆಯಲ್ಲಿ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮಗಳಲ್ಲಿ ಮತದಾನ ಬಹಿμÁ್ಕರ ಪ್ರತಿಭಟನೆಗಳು ನಡೆದಿದ್ದು ಈ ವೇಳೆ ಜಿಲ್ಲಾಡಳಿತ ಮತ್ತು ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಮತದಾನ ಮಾಡಲು ಮನ ಒಲಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ
ಮಾಡಲಾಯಿತು. ತಾಲ್ಲೂಕಿನಲ್ಲಿ 10 ಮತಗಟ್ಟೆಗಳಲ್ಲಿ ಗರಿಷ್ಟ ಮತ್ತು 2 ಮತಗಟ್ಟೆಗಳಲ್ಲಿ ಕನಿಷ್ಟ ಮತದಾನವಾಗಿದೆ ಎಂದರು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯ ಚುನಾವಣಾ ರಾಯಭಾರಿ ಡಾ.ಶುಭ್ರತಾ ಮಾತನಾಡಿ ಸ್ವೀಪ್ ವತಿಯಿಂದ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನದ ಪ್ರಮಾಣ ಹೆಚ್ಚಿದೆ. ಜಿ.ಪಂ ಸಿಇಓ ಮತ್ತು ಸಿಎಸ್ ರವರು ಸ್ವೀಪ್ ಸಮಿತಿಯ ಚಾಲಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸ್ವೀಪ್ ಮತದಾನ ಜಾಗೃತಿ ಒಂದು ನಿರಂತರ ಕೆಲಸವೆಂದು ತಿಳಿಸಿದರು.
ಇನ್ನೋರ್ವ ಚುನಾವಣಾ ರಾಯಭಾರಿ ನಿವೇದನ್ ನೆಂಪೆ ಮಾತನಾಡಿ ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಸಂದೇಶವನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿ ನಾವು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.
ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕುರಿತು ಏರ್ಪಡಿಸಲಾಗಿದ್ದ ಕ್ವಿಜ್ ಸ್ಪರ್ಧೆ ವಿಜೇತ ಆರ್ಯುವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಮಾತನಾಡಿ, ಮೆಡಿಕಲ್ ವಿದ್ಯಾರ್ಥಿಗಳಾದ ನಾವು ಓದುವುದಕ್ಕೆ ಮಾತ್ರ ಸೀಮಿತ ಆಗಿದ್ದೆವು. ನಮ್ಮ ಕಾಲೇಜಿಗೆ ಸ್ವೀಪ್ ಸಮಿತಿಯವರು ಆಗಮಿಸಿ ಮತದಾನ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಕುರಿತು ಜಾಗೃತಿ ಮೂಡಿಸಿದರು ಎಂದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವೀಪ್ ಚಟುವಟಿಕೆಳಿಂದಾಗಿ ಜಿಲ್ಲೆಯಲ್ಲಿ ಶೇ.2 ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿರುವುದು ಸಂತಸದ ವಿಷಯ. ಇದಕ್ಕಾಗಿ ಶ್ರಮಿಸಿದ ಜಿಲ್ಲಾ, ತಾಲ್ಲೂಕು ಸ್ವೀಪ್ ಸಮಿತಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳು, ಕೆಎಸ್‍ಆರ್ ಪಿ, ಹೋಂ ಗಾಡ್ರ್ಸ್, ಪಾಲಿಕೆ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ತಾಲ್ಲೂಕುಗಳ ಇಓಗಳು ಮತ್ತು ಜಿಲ್ಲಾ ವಿಕಲಚೇತನಾಧಿಕಾರಿ ಶಶಿರೇಖಾ ಇವರು ಸ್ವೀಪ್ ಚಟುವಟಿಕೆಗಳ ವರದಿಯನ್ನು ಸಭೆಯಲ್ಲಿ ಸಲ್ಲಿಸಿದರು.
ಇದೇ ವೇಳೆ ಮತದಾನ ಜಾಗೃತಿ ಕುರಿತು ಏರ್ಪಡಿಸಲಾಗಿದ್ದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಆಯೋಜಿಸಿದ್ದ ಕಿರುಚಿತ್ರ, ರೇಡಿಯೋ ಶಿವಮೊಗ್ಗ ಎಫ್ ಎಂ ನಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ವಿತರಿಸಲಾಯಿತು. ಹಾಗೂ 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ನವೀದ್ ಅಹ್ಮದ್ ಪರ್ವೇಜ್ ಹಾಗೂ ಸೊರಬ ತಾಲ್ಲೂಕು ತಹಶೀಲ್ದಾರ್ ಹುಸೇನ್ ಇವರನ್ನು ಅಭಿನಂದಿಸಲಾಯಿತು. ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಅಭಿನಂದನಾ ಪತ್ರ ನೀಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾವಣಾ ರಾಯಭಾರಿಗಳಾದ ಜ್ಯೋತಿ, ರಜತ್ ದೀಕ್ಷಿತ್, ನಾಗರಾಜ ತುಮರಿ, ಸ್ಪರ್ಧಾ ವಿಜೇತರು, ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.