ಶಿವಮೊಗ್ಗ,ಜೂ.1:
ಬಡವರ ಅವರು ಬೆವರು ಒರೆಸುವುದರಲ್ಲಿ ಸಿಗುವ ಸುಖ ರಕ್ತ ಹರಿಸುವುದರಲ್ಲಿ ಸಿಗುವುದಿಲ್ಲ. ನಾನು ಬಡವರ ನೊಂದವರ ನೆರಳಾಗಿ ಈ ಚುನಾವಣೆಯಲ್ಲಿ ಪ್ರಾಮಾಣಿಕ ಕೆಲಸ ಮಾಡಲು ನಿಂತಿದ್ದೇನೆ. ಆದರೆ ಕೊರೊನಾ ಫಲಾನುಭವಿ ಇಡೀ ಬಿಜೆಪಿಯ ಮಾನ ಮರ್ವಾದೆಯನ್ನು ಹರಾಜು ಹಾಕುತ್ತಿರುವುದನ್ನು ಬಿಜೆಪಿ ಕಾರ್ಯಕರ್ತರೇ ಸಹಿಸಿಕೊಳ್ಳುತ್ತಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಾನು ಒಬ್ಬ ಪೈಲ್ವಾನ್, ನೊಂದವರ ನೆರಳಾಗಲು ಎನ್ಪಿಎಸ್ ಹೆಸರಲ್ಲಿ ಅತಂತ್ರ ಸ್ಥಿತಿಯಲ್ಲಿರುವ ನೌಕರರನ್ನು ಉಳಿಸಲು, ಕಾರ್ಮಿಕರನ್ನು ರಕ್ಷಿಸಲು ನಿವೃತ್ತಿ ನೌಕರರನ್ನು, ಕಾಪಾಡಲು ನ್ಯಾಯಯುತ ಹೋರಾಟದ ಮೂಲಕ ಶಕ್ತಿ ನೀಡುವ ಕೆಲಸ ಮಾಡುತ್ತೇನೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಆದರೆ ಪ್ರಸಕ್ತ ಚುನಾವಣೆಯಲ್ಲಿ ಗುಂಡು ತುಂಡುಗಳ ಹಬ್ಬ ಮಾಡುತ್ತಿರುವ, ಹಣಕೊಟ್ಟು ಪದವೀಧರ ವಿದ್ಯಾವಂತರ ಮತಗಳನ್ನು ಪಡೆಯಲು ಯತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿ ವರ್ತನೆ ಈಗ ನಾಚಿಕೆ ತರಿಸುತ್ತಿದೆ. ಕೆಸರಲ್ಲಿ ಬೆಳೆದಿದ್ದ ಕಮಲ ಮತ್ತೆ ಕೆಸರು ಸೇರುತ್ತಿದೆ ಎಂದು ಹೇಳಿದರು.
ಅವರನ್ನು ಒಪ್ಪಿಕೊಂಡಿರುವ ಸಭಾಪತಿ ಆಗಿದ್ದ ಶಂಕರಮೂರ್ತಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭ್ರಷ್ಟ ವ್ಯವಸ್ಥೆಯ ಚುನಾವಣೆಗೆ ಮುಂದಾಗಿರುವುದು ನಾಚಿಕೆಗೇಡಿನ ವಿಚಾರ. ಭ್ರಷ್ಟ ವ್ಯವಸ್ತೆಯನ್ನು ಚುನಾವಣೆಯಲ್ಲಿ ತಂದಿರುವ ಬಿಜೆಪಿಗೆ ನನ್ನ ಧಿಕ್ಕಾರ. ನಾನು ರಾಜ್ಯ ಹಾಗೂ ದೇಶದ ನಾಲ್ಕು ಅಂಗಗಳಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿಯವರೆಗೆ ಹಣ ಮಾಡಿಲ್ಲ. ಬರಿಗೈನ ಆಯನೂರು ಮಂಜುನಾಥ್ ನಿಷ್ಠಾವಂತ ಸೇವಕನಾಗಿ ನಿಮ್ಮ ಕೆಲಸ ಮಾಡುತ್ತಾನೆ ಎಂದು ಹೇಳಿದರು.
ಹೋರಾಟದ ಹಿನ್ನೆಲೆಯಲ್ಲಿ ಮತದಾರರು ನನ್ನನ್ನು ಗಟ್ಟಿಯಾಗಿ ಕೈ ಹಿಡಿಯುತ್ತಾರೆ ಎಂದರು.
ಅಷ್ಟು ವರ್ಷಗಳ ಕಾಲ ಹತ್ತಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ನನಗೆ ಒಮ್ಮೆಯೂ ಯಾವುದೇ ಸಚಿವ ಸ್ಥಾನ ನೀಡಲಿಲ್ಲ. ನಿಗಮ ಮಂಡಳಿ ಚೇರ್ಮನ್ ಗಿರಿ ನೀಡಲಿಲ್ಲ. ಸಭಾಪತಿ ಆಗುವ ಅವಕಾಶವನ್ನು ನೀಡಲಿಲ್ಲ. ಅದಕ್ಕೆ ನಾನು ತಲೆಕೆಡಿಸಿಕೊಳ್ಳಲೂ ಇಲ್ಲ. ಹಾಗೆಯೇ ಯಾವುದೇ ಸರ್ಕಾರವಿದ್ದರೂ ನಿಜವಾಗಿಯೂ ನೋಂದವರ ಗಟ್ಟಿ ಧ್ವನಿಯಾಗಿ ನಿಂತಿದ್ದೇನೆ ಮುಂದೆಯೂ ನಿಲ್ಲುತ್ತೇನೆ ಎಂದು ಆಯನೂರು ಹೇಳಿದರು.
ಹೋರಾಟ ಮಾಡುವ ಮನೋಸ್ಥಿತಿಯನ್ನು ಬೆಳೆಸಿಕೊಂಡಿದ್ದೇನೆ. ಹಣ ಹೆಂಡ ಚೆಲ್ಲಿ ಮಾಂಸ ಮಧ್ಯ ಮಾರಾಟ ಮಾಡುವ ವಿತರಕ ಬೇಕೋ ಬರಿಗೈನ ನಿಜ ಹೋರಾಟಗಾರ ಬೇಕೋ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ನಾನು ಇಷ್ಟು ವರ್ಷಗಳ ಕಾಲ ನಿಷ್ಕಳಂಕ ರಾಜಕಾರಣ ಮಾಡಿದ್ದೇನೆ ಎಲ್ಲೂ ಹಣ ಮಾಡಿಲ್ಲ ಹಣದ ಮದವನ್ನು ಮತದಾರರು ಸೋಲಿಸಲೇಬೇಕು. ನನ್ನಂತೆ ಹೋರಾಟದ ಹಾದಿಯಲ್ಲಿದ್ದ ಯಾರೇ ಆಗಲಿ ಮಾತಾಡಲಿ. ಬದುಕಿಗಾಗಿ ನನ್ನ ರಾಜಕಾರಣವಲ್ಲ. ಅಲ್ಲಿ ಹೋರಾಟದ ಮೂಲಕ ನೊಂದವರಿಗೆ ನ್ಯಾಯ ಒದಗಿಸುವ ಇಚ್ಚಾಶಕ್ತಿ ನನ್ನದು ಅದನ್ನು ಮತದಾರರು ಅರ್ಥ ಮಾಡಿಕೊಂಡಿದ್ದಾರೆಂದರು.
ಧರ್ಮ ಸಂಸ್ಕೃತಿ ಎಂದು ಹೇಳುವ ಬಿಜೆಪಿ ಈಗ ಕುಲಗೆಟ್ಟು ಹೋಗಿದೆ. ಇಂತಹ ವ್ಯವಸ್ಥೆಯನ್ನು ಹೇಗೆ ತಾನೇ ಒಪ್ಪಿಸಿಕೊಳ್ಳಲು ಸಾಧ್ಯ. ಅಡ್ಡ ದಾರಿಯಲ್ಲಿ ಅಧಿಕಾರ ಪಡೆಯಲು ಅಡ್ನಾಡಿಗಳು ಹೊಂಟಿದ್ದಾರೆ. ದುಡ್ಡಿನ ಅಹಂಕಾರದ ಅವಳಿಗೆ ಮತದಾರರು ಸರಿಯಾಗಿ ಪಾಠ ಕಲಿಸುತ್ತಾರೆ ಎಂದರು.