ಶಿವಮೊಗ್ಗ, ಮೇ 30: ಪೋಷಕರೇ ನಿಮ್ಮ ಮಕ್ಕಳನ್ನು ವಿಶ್ವಾಸವಿಟ್ಟುಕೊಂಡು ಸರ್ಕಾರಿ ಶಾಲೆಗೆ ಕಳಿಸಿ , ನಾವು ಉತ್ತಮ ಶಿಕ್ಷಣ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ ಸರ್ಕಾರಿ ಶಾಲೆಗಳು ಅಧಿಕೃತವಾಗಿ ಪ್ರಾರಂಭವಾಗುತ್ತವೆ. ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಉತ್ಸುಕರಾಗಿದ್ದಾರೆ. ಪಠ್ಯಪುಸ್ತಕ ಸೇರಿದಂತೆ ಯೂನಿಫಾರಂ ಮುಂತಾದವುಗಳನ್ನು ಮಕ್ಕಳಿಗೆ ತಲುಪಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವು ಜಾಗದಲ್ಲಿ ಮಾತ್ರ ಸ್ವಲ್ಪ ತೊಂದರೆಯುಂಟಾಗಿದ್ದು, ಅವೆಲ್ಲವನ್ನು ಸರಿಪಡಿಸಲಾಗುತ್ತದೆ ಎಂದರು.
ಶೇ.90 ರಷ್ಟು ಪಠ್ಯ ಪುಸ್ತಕ ಬಂದಿದೆ, ಸಮವಸ್ತ್ರ ಒಂದು ಭಾಗದಲ್ಲಿ ಕಳಪೆ ದೂರು ಬಂದಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬನ್ನಿ. ಇರುವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. 600 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸಲಾಗುವುದು. ಫಲಿತಾಂಶ ಕುಸಿದಿದೆ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದರೆ, ಬಿಜೆಪಿ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು ಎಂದರು.
ಕಾಪಿ ಹೊಡೆಯುವುದನ್ನು ತಡೆಯಲು ಪರೀಕ್ಷೆಯನ್ನು ಪಾರದರ್ಶಕವಾಗಿ ಮಾಡಿದ್ದೇವೆ. ಗ್ರೇಸ್ ಮಾಕ್ರ್ಸ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆದರೆ ನಾವು ಗ್ರೇಸ್ ಮಾಕ್ರ್ಸ್ ಕೊಟ್ಟಿರುವುದು ಕೇವಲ ಶೆ.10 ರಷ್ಟು ಮಾತ್ರ. ಬಿಜೆಪಿಯವರೇ ಶೇ. 10ರಷ್ಟನ್ನು ಗ್ರೇಸ್ ಮಾಕ್ರ್ಸ್ ಕೊಟ್ಟಿದ್ದರು. ಅದು ಗೊತ್ತಿಲ್ಲದೆ ಅವರು ದೂರುತ್ತಿದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ಇರುವುದಿಲ್ಲ. ಈ ಗ್ರೇಸ್ ಮಾಕ್ರ್ಸ್ನಿಂದ ಮಾಸ್ಕಾಫಿ ಕಡಿಮೆಯಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡುತ್ತಿದ್ದೇವೆ. ಶಿಕ್ಷಕರ ನೇಮಕಾತಿ ನನ್ನ ಅವಧಿಯಲ್ಲಿ ಹೆಚ್ಚಾಗಿದೆ. 2017-2018ರ ಸಾಲಿನಲ್ಲಿ 1729, 2020-21 ಸುರೇಶ್ ಕುಮಾರ್ ಅವಧಿಯಲ್ಲಿ 1994, 2021-22ರಲ್ಲಿ 1385, ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನನ್ನ ಅವಧಿಯಲಿ ಒಂದು ವರ್ಷದಲ್ಲಿ 13000 ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇನೆ. ಈಗಾಗಲೇ 12 ಸಾವಿರ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನೂ 43,000 ಹುದ್ದೆ ಖಾಲಿ ಇವೆ ಅದನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇನೆ ಎಂದರು.
ಎಲ್ಲಾ ಶಾಲೆಗಳಿಗೂ ವಿದ್ಯುತ್ ಮತ್ತು ನೀರನ್ನು ಉಚಿತವಾಗಿ ನೀಡಿದ್ದೇವೆ. ಪರೀಕ್ಷೆಯ ಪಾವಿತ್ರ್ಯತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಮಕ್ಕಳು ಶಾಲೆಯಿಂದ ದೂರವಿರಬಾರದು ಎಂಬ ಹಿನ್ನಲೆಯಲ್ಲಿ ವರ್ಷಕ್ಕೆ ಮೂರು ಬಾರಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಪರೀಕ್ಷೆಗಳು ಲೇಟಾಗುತ್ತವೆ ಎಂದು ದೂರುಗಳಿವೆ. ಮುಂದಿನ ವರ್ಷದಿಂದ ಅವೆಲ್ಲ ತೊಂದರೆಗಳು ಸರಿಯಾಗುತ್ತದೆ. ಮೂರನೇ ಬಾರಿಗೆ ಪರೀಕ್ಷೆಗೆ ಅವಕಾಶಕೊಟ್ಟಿದ್ದರಿಂದ ರಾಜ್ಯದಲ್ಲಿ ಸಾವಿರಾರು ಮಕ್ಕಳು ಉತ್ತೀರ್ಣರಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಒಳ್ಳೆಯ ಕೆಲಸವಲ್ಲವೇ ಎಂದು ಪ್ರಶ್ನೆ ಮಾಡಿದರು.