ಶಿವಮೊಗ್ಗ, ಮೇ ೩೦:
ನಗರದ ಹೊಸಮನೆ ಬಡಾವಣೆಯ ೩ನೇ ತಿರುವಿನಲ್ಲಿ ನೆನ್ನೆ ರಾತ್ರಿ ಕಿಡಿಗೇಡಿ ಗಳು ಗಾಂಜಾ ಮತ್ತಿನಲ್ಲಿ ದಾಂಧಲೆ ನಡೆಸಿದ್ದು, ೪ ಕಾರುಗಳು, ೨ ಆಟೋ ಹಾಗೂ ಎರಡು ಬೈಕ್ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಪುಡಿಗೈದಿದ್ದು, ಸ್ಥಳಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಗರದ ಮಧ್ಯದಲ್ಲಿ ಈ ರೀತಿಯ ಕಿಡಿಗೇಡಿಗಳ ಕೃತ್ಯ ನಡೆದಿದ್ದು, ನಾಗರೀಕ ಸಮಾಜ ತಲೆತಗ್ಗಿ ಸುವಂತಾಗಿದೆ. ಮತ್ತು ಸ್ಥಳೀಯರು ಹೇಳುವ ಪ್ರಕಾರ ಭಯದ ವಾತಾವರ ಣದಲ್ಲಿ ಜೀವಿಸುತ್ತಿದ್ದೇವೆ. ಪೊಲೀಸರು ಕಾಟಾಚಾರಕಷ್ಟೇ ಬಂದು ಹೋಗುತ್ತಾರೆ ಎಂದು ನನ್ನ ಬಳಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಾನೊಬ್ಬ ಜನಪ್ರತಿನಿ ಧಿಯಾಗಿ ನಾಗರೀಕರ ಆಸ್ತಿ ಪಾಸ್ತಿ ರಕ್ಷಣೆ ಮಾಡುವುದು ಮತ್ತು ಅವರಿಗೆ ಭದ್ರತೆಯ ಜೀವನ ನೀಡುವುದು ನನ್ನ ಕರ್ತವ್ಯವಾ ಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಎಗ್ಗಿಲ್ಲದೆ ಗಾಂಜಾ ಯುವಕರ ಕೈಯಿಗೆ ಸಿಗುತ್ತಿದೆ
ಎಂದರೆ ಇದು ಪೊಲೀಸ್ ವೈಫಲ್ಯವ ಲ್ಲವೇ ಎಂದು ಪ್ರಶ್ನಿಸಿದರು.
ಗೃಹ ಸಚಿವರೇ ದಯವಿಟ್ಟು ಶಿವಮೊಗ್ಗಕ್ಕೆ ಬನ್ನಿ ಇಲ್ಲಿ ಸರಣಿಕೊಲೆಗ ಳಾಗಿವೆ. ಪೊಲೀಸ್ ಅವ್ಯವಸ್ಥೆಯಿಂದ ರೌಡಿಗಳಿಗೆ ಭಯವಿಲ್ಲದಂತಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ನನಗೆ ತಿರುಗಿ ಪ್ರಶ್ನೆ ಕೇಳುತ್ತಾರೆ. ನಾನೊಬ್ಬ ಶಾಸಕನಾಗಿ ನನಗೆ ಅಧಿಕಾರವಿಲ್ಲವೇ. ಈ ಸರ್ಕಾರದಲ್ಲಿ ನಾಗರಿಕರು ಭಯದ ವಾತವರಣದಲ್ಲಿ ಬದುಕುತ್ತಿದ್ದಾರೆ. ಯಾವುದೋ ದುಷ್ಟ ಶಕ್ತಿ ಕುಮ್ಮಕ್ಕು ನೀಡುತ್ತಿದೆ ಎಂದು ಜನ ಚರ್ಚಿಸುತ್ತಿದ್ದಾರೆ. ಹೊಸಮನೆಯಲ್ಲಿ ಸಿಸಿ ಕ್ಯಾಮರಾಗಳ ವೈಯರ್ಗಳನ್ನು ಕಿಡಿಗೇಡಿಗಳು
ಕಟ್ಟುಮಾಡಿದ್ದಾರೆ. ಕೆಲವು ಮಹಿಳೆಯರು ಆರೋಪಿಸುವಂತೆ ಪೊಲೀಸರೇ ಅವರ ಜೊತೆಗೆ ಎಣ್ಣೆ ಪಾರ್ಟಿ ಮಾಡುತ್ತಾರೆ ಎಂದು ಹೇಳು ತ್ತಾರೆ. ನೆನ್ನೆ ಕೂಡ ಬರ್ತ್ಡೇ ನೆಪದಲ್ಲಿ ರಾತ್ರಿ ೨.೩೦ರ ಸುಮಾರಿಗೆ ೬-೭ ಜನರ ತಂಡ ಪಾರ್ಟಿ ಮಾಡಿ ಪಟಾಕಿ ಹೊಡೆದು ಮಚ್ಚಿನಲ್ಲಿ ಸ್ಥಳದಲ್ಲಿದ್ದ ವಾಹನಗಳ ಮೇಲೆ ದಾಂದಲೆ ಮಾಡಿ ಹೋಗಿದ್ದಾರೆ. ಮೈಸೂರಿನಿಂದ ಆಗಮಿಸಿದ ಕುಟುಂಬವೊಂದರ ಕಾರಿನ ಮೇಲೂ ದಾಳಿ ಮಾಡಿದ್ದಾರೆ.
ನೀರು ತುಂಬಿಟ್ಟ ಡ್ರಮ್ಗಳನ್ನು ಕೂಡ ಮಚ್ಚಿನಿಂದ ಕೂಡ ಕೊಯ್ದಿದ್ದಾರೆ. ದೊಡ್ಡಮ್ಮ ದೇವಸ್ಥಾನದ ಬಳಿ ಖಾಲಿ ಇರುವ ದೇವಸ್ಥಾನದಲ್ಲಿ ಮದ್ಯದ ಬಾಟಲಿಗಳ ರಾಶಿಯೇ ಬಿದ್ದಿದ್ದು, ಅಲ್ಲಿಯೇ ಗಾಂಜಾ ಖಾಲಿ ಪ್ಯಾಕೇಟ್ ಗಳು ಕೂಡ ಕಂಡು ಬಂದಿದೆ. ನಾನೇ ಕಣ್ಣಾರೇ ನೋಡಿದ ಈ ದೃಶ್ಯ ನಮ್ಮ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾ ರಿಗಳ ಮೇಲೂ ಸೂಕ್ತ ಕ್ರಮಕೈ ಗೊಳ್ಳಬೇಕು. ಹಾಗೂ ನಾಗರೀಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆತ್ಮ ರಕ್ಷಣೆಗಾಗಿ ನಾಗರೀಕರೆ ಗೂಂಡಾ ವರ್ತನೆ ತೋರುವ ಪರಿಸ್ಥಿತಿ ಒದಗಿ ಬರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜ್ಞಾನೇಶ್ವರ್, ನಾಗರಾಜ್ ಮತ್ತಿತರರು ಇದ್ದರು.