ಶಿವಮೊಗ್ಗ:
ನರೇಂದ್ರ ಮೋದಿ ಒಂದೇ, ಈಶ್ವರಪ್ಪ ಅವರೂ ಒಂದೆ. ಇವರಿಬ್ಬರು ಸಮಕಾಲಿನವರು ಎಂದು ಅಖಿಲ ಭಾರತ ಮಡಿವಾಳ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಎನ್.ಜಿರಪ್ಪ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಎಲ್ಲ ರಾಜ್ಯಗಳನ್ನು ಸುತ್ತುಕೊಂಡು ಬಂದಿದ್ದೇನೆ. ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಹಿಂದುಳಿದ ವರ್ಗದ ನಾಯಕ, ಅಹಿಂದ ನಾಯಕ ಎಂದರೆ ಅದು ಈಶ್ವರಪ್ಪ ಮಾತ್ರ. ಸಿದ್ದರಾಮಯ್ಯ ಅವರು ನಮ್ಮ ಸಮಾಜದ ಅನ್ನಪೂರ್ಣಮ್ಮ ವರದಿಯನ್ನು ಅಡಿಯಲ್ಲಿ ಹಾಕಿಕೊಂಡು ಕೂತಿದ್ದಾರೆ ಎಂದು ದೂರಿದರು.
ಅನ್ನಪೂರ್ಣಮ್ಮ ವರದಿ ಬಂದು 10 ವರ್ಷ ಆಗಿದೆ. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಬೇಕು ಎಂದು ಅನ್ನಪೂರ್ಣಮ್ಮ ವರದಿಯಲ್ಲಿದೆ. ಇದನ್ನು ವರದಿ ಜಾರಿ ಮಾಡುತ್ತೇವೆ ಎಂದು ಬರೀ ಹೇಳುತ್ತಲೇ ಬರುತ್ತಿದ್ದಾರೆ ವಿನಾ ಬೇರೆ ಏನೂ ಮಾಡುತ್ತಿಲ್ಲ. ಎಲ್ಲ ವರ್ಗದವರಿಗೆ ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಅವರು ನಮ್ಮ ಮಡಿವಾಳರಿಗೆ ದೌರ್ಭಾಗ್ಯ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕನೇ ಅಲ್ಲ ಎಂದು ಹರಿಹಾಯ್ದರು.
ಈಶ್ವರಪ್ಪ ಅವರು ತತ್ವ ಸಿದ್ದಾಂತವನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಇವರು ಕಂದಾಯ ಸಚಿವರಾಗಿದ್ದಾಗ ಮಡಿವಾಳ ಸಮಾಜದ ಮಠಕ್ಕೆ ರಸ್ತೆ, ಕಟ್ಟಡಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಇದೇ ರೀತಿ ಸುಮಾರು 38 ಮಠಗಳಿಗೆ ಅನುದಾನ ಕೊಟ್ಟಿದ್ದಾರೆ, ಬೋವಿ, ಮಡಿವಾಳ, ಈಡಿಗರು, ದಲಿತ, ಬ್ರಾಹ್ಮಣ, ಲಿಂಗಾಯತ ಮಠಗಳಿಗೆ ಸೇರಿದಂತೆ ಎಲ್ಲ ಸಮುದಾಯಕ್ಕೆ ಅನುದಾನ ಕೊಟ್ಟ ಮಹಾನ್ ವ್ಯಕ್ತಿ. ಹೀಗಾಗಿ ಈಶ್ವರಪ್ಪ ಅವರಿಗೆ ಮತ ಕೊಡಬೇಕು. ನಮ್ಮ ಸಮಾಜದ ಒಬ್ಬರು ಕನಿಷ್ಟ 10 ಮತಗಳನ್ನು ಕೊಡಿಸಬೇಕು. ಕ್ರಮ ಸಂಖ್ಯೆ 8, ಕಬ್ಬಿನ ಜಲ್ಲೆ ಜೊತೆ ರೈತ ಚಿಹ್ನೆಗೆ ಮತ ಕೊಡಬೇಕು. ಮಡಿವಾಳ ಸಮಾಜದ ಕನಿಷ್ಠ ಪಕ್ಷ ಒಂದು ಲಕ್ಷ ಮತಗಳನ್ನು ಈಶ್ವರಪ್ಪ ಅವರಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಾನು ಕಂದಾಯ ಸಚಿವರಾಗಿದ್ದಾಗ ಮಡಿವಾಳ ಸಮಾಜದ ಸೇರಿದಂತೆ ದಲಿತ, ಬ್ರಾಹ್ಮಣ, ಲಿಂಗಾಯತ ಮಠಗಳಿಗೂ ಅನುದಾನವನ್ನು ಕೊಟ್ಟಿದ್ದೇನೆ. ಇದನ್ನು ಆಯಾ ಸಮಾಜದವರು ನೆನಪು ಮಾಡಿಕೊಂಡು ನನಗೆ ಬೆಂಬಲ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ. ಸರ್ವಜನಾಂಗಕ್ಕೂ ಈಶ್ವರಪ್ಪ ಒಳ್ಳೆದು ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಇಡೀ ಹಿಂದು ಸಮಾಜ ನನ್ನ ಜೊತೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಮಡಿವಾಳ ಸಮಾಜದವರು ಇಷ್ಟೊಂದು ಸಂಖ್ಯೆಯಲ್ಲಿ ಬಂದು ನನಗೆ ಬೆಂಬಲ ಕೊಡುತ್ತಾರೆ ಎಂದು ಭಾವಿಸಿರಲಿಲ್ಲ ಹರ್ಷ ವ್ಯಕ್ತಪಡಿಸಿದರು.