ಶಿವಮೊಗ್ಗ, ಮೇ.1:
ಕರ್ನಾಟಕ ರಾಜ್ಯದ ವಾಲ್ಮೀಕಿ ಸಮುದಾಯ, ಪರಿಶಿಷ್ಟ ಪಂಗಡವು ಹೆಚ್ಚು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ವಾಲ್ಮೀಕಿ ಸಮುದಾಯದ ಅಪಾರ ಮತಗಳಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಇಡೀ ಸಮುದಾಯ ಹೆಚ್ಚಿನ ಮತ ನೀಡಿ ಗೆಲ್ಲಿಸಲಿದೆ ಎಂದು ಕೆ ಪಿ ಸಿ ಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷ ವಿಜಯ ನಾಯಕ್ ಎಂ. ಅವರು ತಿಳಿಸಿದರು.
ಅವರಿಂದು ಮಧ್ಯಾಹ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಾಲ್ಮೀಕಿ ಸಮುದಾಯದವರಿಗೆ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚಿನ ಸ್ಥಾನ ನೀಡಿದೆ. ಸರ್ಕಾರದಲ್ಲಿ ಮೂವರು ಮಂತ್ರಿಗಳನ್ನು ಮಾಡಿದೆ ನಿಗಮ ಮಂಡಳಿಗಳಿಗೆ ಹೆಚ್ಚಿನ ಆಧ್ಯತೆ ನೀಡಿದೆ. ವಾಲ್ಮೀಕಿ ಸಮುದಾಯಕ್ಕೋಸ್ಕರ ಸಚಿವಾಲಯವನ್ನು ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ವಿಧಾನಸಭಾ ಪ್ರಾಂಗಣದಲ್ಲಿ ಎರಡು ಎಕರೆ ಜಾಗ ಮೀಸಲಿಟ್ಟು ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿದ್ದು, ವಿಶೇಷವಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಅತಿ ಹೆಚ್ಚಿನ ಸಾಗುವಳಿ ಪತ್ರ ನೀಡಿದೆ. ಅಂತೆಯೇ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎರಡು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಒಂದು ಸಾಮಾನ್ಯ ಕ್ಷೇತ್ರ ಸೇರಿ ಮೂರು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ವಾಲ್ಮೀಕಿ ಸಮುದಾಯದ ಪರ ಕಾಂಗ್ರೆಸ್ ಪಕ್ಷ ಇದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ನಮ್ಮ ಸಮುದಾಯದ ಶೇಕಡ 90ಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಫಲಾನುಭವಿಗಳಾಗಿದ್ದಾರೆ, ಇಡೀ ಸಮುದಾಯ ಕಾಂಗ್ರೆಸ್ ಪಕ್ಷದ ಕೈಹಿಡಿಯುವ ಭರವಸೆಯಿದ್ದು ಈಗಾಗಲೇ 15 ಜನ ಸಮುದಾಯದ ಶಾಸಕರು ಹಾಗೂ ಓರ್ವ ವಿಧಾನಪರಿಷತ್ ಸದಸ್ಯರು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಪರಿಶಿಷ್ಟ ವರ್ಗದ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರನ್ನು ಸಮುದಾಯದ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ಕೆ. ಆರ್. ಶ್ರೀಧರ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಸವರಾಜಪ್ಪ, ವಿಭಾಗದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀರೇಶ್ ಜೋಗಿಹಳ್ಳಿ, ಪ್ರಮುಖರಾದ ಲೋಕಪ್ಪ ಎನ್ ಟಿ, ಬಸವರಾಜಪ್ಪ, ಬಸವರಾಜಪ್ಪ ಬಿ, ಕರಿಬಸಪ್ಪ, ಜಿಆರ್ ದಿನೇಶ್, ಸಂಜೀವ್ ಹಾಗೂ ಇತರರು ಉಪಸ್ಥಿತರಿದ್ದರು.