ಶಿವಮೊಗ್ಗ: ಪಕ್ಷದ ವಿರುದ್ಧ ಸಿಡಿದೆದ್ದು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ 10 ಮಂದಿಯನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
ಒಟ್ಟು 10 ಜನ ಬಿಜೆಪಿಯ ಮಾಜಿ ಕಾರ್ಪೊರೇಟರ್, ಕೋರ್ ಕಮಿಟಿ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ಸು ಮಾಡಲಾಗಿದೆ.
ಉಚ್ಚಾಟನೆ ಶಿಫಾರಸ್ಸಿಗೆ ಕಾರಣವೇನು?
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದು ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪನವರ ಅನುಯಾಯಿಯಾದ ಹಲವು ಮಂದಿ ಅವರೊಂದಿಗೆ ಈಗ ಗುರುತಿಸಿಕೊಂಡಿದ್ದಾರೆ.
ಪಕ್ಷದ ಶಿಸ್ತು ಹಾಗೂ ನಿರ್ದೇಶನ ಉಲ್ಲಂಘಿಸಿ, ಪಕ್ಷಕ್ಕೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
ಯಾರ ಉಚ್ಚಾಟನೆಗೆ ಶಿಫಾರಸ್ಸು?
ಈಶ್ವರಪ್ಪ ಪುತ್ರ, ಬಿಜೆಪಿ ಕೋರ್ ಕಮಿಟಿ ಸದಸ್ಯ ಕೆ.ಈ. ಕಾಂತೇಶ್, ಮಾಜಿ ಉಪಮೇಯರ್ ಶಂಕರ್ ಗನ್ನಿ, ಮಾಜಿ ಕಾರ್ಪೊರೇಟರ್ ಇ. ವಿಶ್ವಾಸ್, 28 ನೇ ವಾರ್ಡ್ ಎಸ್.ಜಿ. ರಾಜು, ಉಪಮೇಯರ್ ಎಸ್.ಜಿ. ರಾಜು, ಮಾಜಿ ಮೇಯರ್ ಸುವರ್ಣ ಶಂಕರ್, 10 ನೇ ವಾರ್ಡ್ ಮಾಜಿ ಕಾರ್ಪೋರೇಟರ್ ಆರತಿ ಆ.ಮಾ.ಪ್ರಕಾಶ್, ಮಾಜಿ ಮೇಯರ್ ಲತಾ ಗಣೇಶ್, ಬಿಜೆಪಿ ನಗರ ಉಪಾಧ್ಯಕ್ಚ ಮೋಹನ್ ರಾವ್ ಜಾದವ್, ಸಹ್ಯಾದ್ರಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನಿತಾ ಮಂಜುನಾಥ್ ಅವರುಗಳನ್ನು ಉಚ್ಚಾಟನೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.