ಶಿವಮೊಗ್ಗ: ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ತಪ್ಪು ಯಾರು ಮಾಡಿದರೂ ಅದು ತಪ್ಪೇಆಗುತ್ತದೆ. ಸರ್ಕಾರ ಈಗಾಗಲೇ ಎಸ್ಐಟಿ ತನಿಖೆಗೆ ಒಪ್ಪಿಸಿದೆ. ಅದರ ವರದಿ ಬಂದ ನಂತರ ಸತ್ಯ ಹೊರಬೀಳುತ್ತದೆ. ಇದರಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ ಎಂದರು.
ನಮ್ಮದು ಮತ್ತು ರೇವಣ್ಣ ಕುಟುಂಬ ಬೇರೆ ಬೇರೆ ಇದ್ದೇವೆ. ಇದನ್ನು ಪ್ರಜ್ವಲ್ ಪ್ರಕರಣದಲ್ಲಿ ದೇವೇಗೌಡರ ಮತ್ತು ನನ್ನ ಕುಟುಂಬವನ್ನು ಎಳೆದು ತರಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಅವರು ಶಿಕ್ಷೆ ಅನುಭವಿಸಲೇಬೇಕು. ಈ ಮೊದಲೆ ಹೇಳಿದ್ದೇನೆ. ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು, ಎಲ್ಲವೂ ತನಿಖೆಯಾಗಲಿ ಇದರಲ್ಲಿ ನಾನಾಗಲಿ, ದೇವೇಗೌಡರಾಗಲಿ ಯಾವುದೇ ರೀತಿಯ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಂತಹ ಕೃತ್ಯಗಳು ನಡೆಯಬಾರದು ಎಂದು ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮತ್ತು ದೇವೆಗೌಡರು ಪ್ರಧಾನಿಯಾಗಿದ್ದಾಗಲೂ ಸಾವಿರಾರೂ ಜನ ಹೆಣ್ಣುಮಕ್ಕಳು ತಮ್ಮ ಕಷ್ಟ, ಸಮಸ್ಯೆಗಳಿಗೆ ಬಂದಿದ್ದಾರೆ. ಅವರನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ. ನನ್ನ ಮತ್ತು ದೇವೇಗೌಡರ ಕುಟುಂಬವೇ ಬೇರೆ, ರೇವಣ್ಣ ಅವರ ಕುಟುಂಬವೇ ಬೇರೆ. ಪೆನ್ ಡ್ರೈವ್ ಪ್ರಕರಣದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಲಿ, ಇದರಲ್ಲಿ ರಾಜಕೀಯ ಸಂಚು ಇರುವುದೂ ಕೂಡ ಬಯಲಾಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಇದು ಕೇವಲ ನಮ್ಮ ಕುಟುಂಬದ(ಅಂದರೆ ನಾನು ಮತ್ತು ನಮ್ಮ ತಂದೆ) ಪ್ರಶ್ನೆ ಮಾತ್ರವಲ್ಲ, ಇಡೀ ಸಮಾಜವೇ ತಲೆ ತಗ್ಗಿಸುವಂತಹುದು. ಬಹುಶಃ ನನ್ನ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು. ಚುನಾವಣೆಯ ಸಂದರ್ಭವಾದ್ದರಿಂದ ಷಡ್ಯಂತ್ರವಾದರೂ ಇರಬಹುದೋ ಏನೋ ಗೊತ್ತಿಲ್ಲ. ಆದರೂ ವರದಿ ಬರಲಿ, ನೋಡೋಣ. ನಾನು ಮತ್ತು ನನ್ನ ತಂದೆಯವರು ಮಹಿಳೆಯರಿಗೆ ಯಾವಾಗಲೂ ಗೌರವ ಕೊಡುತ್ತೇವೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ವಿನಾಕಾರಣ ಗೂಬೆ ಕೂರಿಸಿದೆ. ಕೇಂದ್ರದ ಯಾವ ಅನುದಾನಗಳೇ ಆಗಲಿ ಹಣಕಾಸು ಆಯೋಗದ ನಿರ್ದೇಶನದಂತೆ ಮಾಡಲಾಗುತ್ತದೆ ಅಷ್ಟೇ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಿದೆ. ಕೇಂದ್ರದ ಹಣದ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚಿನ ಹಣ ಬಿಡುಗಡೆ ಮಾಡಿ ಬರ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿಯ ಭಜನೆ ಮುಂದುವರೆದಿದೆ. ಬರಗಾಲದ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರೀತಿ ಗಳಿಸಬೇಕೆ ಹೊರತೂ ದ್ವೇಷವಲ್ಲ. ಸಂಘರ್ಷದಿಂದ ಏನೂ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಖಜಾನೆಯೀಗ ಖಾಲಿಯಾಗಿದೆ. ಅದಕ್ಕಾಗಿ ವಿಶೇಷ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸಲಾಗುತ್ತಿದೆ ಎಂದರು.
ಮೊದಲ ಹಂತದ ಚುನಾವಣೆ ಮುಗಿದಿದೆ. 14 ಕ್ಷೇತ್ರಗಳ ಪೈಕಿ 12ರಲ್ಲಂತೂ ನಾವು ಗೆದ್ದೇ ಗೆಲ್ಲುತ್ತೇವೆ. ಈಗ ಎರಡನೇ ಹಂತದ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ನಾನು ಬಂದಿದ್ದೇನೆ. ನಾಲ್ಕೈದು ದೊಡ್ಡ ಸಭೆಗಳಲ್ಲಿ ಭಾಗವಹಿಸುತ್ತೇನೆ. ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಗೆದ್ದೇ ಗೆಲ್ಲುತ್ತಾರೆ. ಈ ದೇಶಕ್ಕೆ ಮೋದಿ ಪ್ರಧಾನಿಯಾಗುವುದು ಅನಿವಾರ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಎಸ್.ಎಲ್. ಭೋಜೇಗೌಡ, ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಕಡಿದಾಳ್ ಗೋಪಾಲ್, ಟಿ.ಡಿ. ಮೇಘರಾಜ್, ರಘುಪತಿ ಭಟ್ ಸೇರಿದಂತೆ ಹಲವರಿದ್ದರು.