ತೀರ್ಥಹಳ್ಳಿ: ಇಡೀ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆಯಿದೆ. ಬಹಳ ದೊಡ್ಡ ಲೀಡ್ ನಲ್ಲಿ ಈ ಬಾರಿ ಬಿ.ವೈ. ರಾಘವೇಂದ್ರ ಗೆಲ್ಲಲಿದ್ದಾರೆ. ಜನರಿಗೆ ಈ ಬಾರಿಯ ಅವರ ಕೆಲಸ ಸಂತೋಷ ಕೊಟ್ಟಿದೆ. ಇನ್ನೊಂದು ಜೆಡಿಎಸ್ ಬೆಂಬಲ ಆನೆಯ ಬಲ ತಂದುಕೊಟ್ಟಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ಜೆಡಿಎಸ್ ನೆಲೆಯಾಗಿದೆ. ಎಲ್ಲರೂ ಒಮ್ಮತದಿಂದ ಕಾರ್ಯಕರ್ತರು ಒಟ್ಟಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್ ಬರಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಹತ್ತಿರಕ್ಕೂ ಬರಲ್ಲ ಎಂದರು.
ರಾಷ್ಟ್ರ ಸದೃಢ ಆಗಬೇಕು. ಧರ್ಮ-ಜಾತಿ ಎಲ್ಲವನ್ನು ಮೀರಿ ಮೋದಿ ದೇಶದ ಪ್ರಧಾನಿ ಆಗಬೇಕು ಎನ್ನುವುದು ಜನರ ಆಶಯವಾಗಿದೆ. ಮೋದಿಯವರ ಸಾಧನೆ ಬಗ್ಗೆ ಜನರಿಗೆ ಒಲವಿದೆ. ಕಾಂಗ್ರೆಸ್ ಪ್ರಣಾಳಿಕೆಗೂ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದರು.
ಈಶ್ವರಪ್ಪ ಸ್ಪರ್ಧೆಯಿಂದ ಏನು ಪರಿಣಾಮ ಆಗುವುದಿಲ್ಲ. ಪ್ರೀತಿಯಿಂದ ಕೆಲವು ಮಾತನಾಡಿದ್ದಾರೆ. ನನಗೂ ಅವರಿಗೂ ಅವಿನಾಭಾವ ಸಂಬಂಧವಿದೆ. ಅವರ ಬಗ್ಗೆ ಈಗೇನು ಮಾತನಾಡುವುದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ತನಿಖೆ ಆಗುತ್ತಿದೆ. ಈ ಕೇಸ್ ಅನ್ನು ಕಾಂಗ್ರೆಸ್ ಸದ್ಬಳಕೆ ಮಾಡಿಕೊಳ್ಳುತಿದೆ. ಹುಬ್ಬಳ್ಳಿ ಹತ್ಯೆ ಹಾಗೂ ಬೆಂಗಳೂರಿನ ಬಾಂಬ್ ಸ್ಫೋಟದ ಬಗ್ಗೆ ಕಾಂಗ್ರೆಸ್ ಯಾಕೆ ಮಾತನಾಡಲಿಲ್ಲ. ತನಿಖೆ ಆಗುತ್ತಿದೆ, ತಪ್ಪಿದ್ದರೆ ಶಿಕ್ಷೆ ಆಗಲಿ ಎಂದರು.
ಜೆಡಿಎಸ್ ನ ಕುಣಜೆ ಪ್ರಭಾಕರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪರ ಕುಮಾರಸ್ವಾಮಿ ಕೋಣಂದೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 10:30 ಕ್ಕೆ ಸಭೆ ನಡೆಯಲಿದೆ. ಅತೀ ಹೆಚ್ಚಿನ ಜನ ಬರಬೇಕು ಎಂದರು.
ಹಾಸನ ಪೆನ್ ಡ್ರೈವ್ ಬಗ್ಗೆ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಸೋಲನ್ನು ಸಹಿಸಿಕೊಳ್ಳಲು ಆಗದೆ ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡುತ್ತಿದ್ದಾರೆ. 28 ಕ್ಕೆ 28 ಬಿಜೆಪಿ ಜೆಡಿಎಸ್ ಗೆಲ್ಲುತ್ತಾರೆ ಎಂಬ ಕಾರಣಕ್ಕೆ ಈ ತರ ಮಾತನಾಡುತ್ತಿದ್ದಾರೆ. ತಪ್ಪಿದ್ದರೆ ಅವರಿಗೆ ಶಿಕ್ಷೆ ಆಗಲಿ ಎಂದರು.
ಈ ಸಂದರ್ಭದಲ್ಲಿ ನವೀನ್ ಹೆದ್ದೂರು, ಬಾಳೆಬೈಲು ರಾಘವೇಂದ್ರ ಸಾಲೇ ಕೊಪ್ಪ ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.