ಶಿವಮೊಗ್ಗ: ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವು (ಕೆಎಸ್‌ಐಸಿ) ಚನ್ನೈ, ಹೈದರಾಬಾದ್ ಸೇರಿದಂತೆ ಒಟ್ಟು 15 ಔಟ್‌ಲೆಟ್‌ಗಳನ್ನು ಹೊಂದಿದೆ. ರೇಷ್ಮೆ ಸೀರೆ ಮಾರಾಟಕ್ಕೆ ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಔಟ್‌ಲೆಟ್‌ಗಳನ್ನು ತೆರೆಯುವ ಸಂಬಂಧ ಸಮಾಲೋಚನೆ ನಡೆಸಲಾಗಿದ್ದು, ಇದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿಗಮದ ನಿರ್ದೇಶಕ ಜಿ.ಪಿ.ವಿಜಯ ಕುಮಾರ್ ತಿಳಿಸಿದ್ದಾರೆ.
ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಮೈಸೂರಿನಲ್ಲಿರುವ ನಿಗಮದ ರೇಷ್ಮೆ ಸೀರೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಿಗಮದ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.
ಅಲ್ಲದೆ ಚನ್ನಪಟ್ಟಣ, ಟಿ.ನರಸೀಪುರ ಘಟಕಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ನಿಗಮದ ಎಲ್ಲಾ ಕಾರ್ಮಿಕರ ಹಿತರಕ್ಷಣೆಯ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅವಲೋಕಿಸಲಾಗಿದೆ. ಮೈಸೂರಿನಲ್ಲಿ ಮಹಿಳೆಯರ ವಿಶೇಷ ಘಟಕವಿದ್ದು ಇಲ್ಲಿನ ಸಿಬ್ಬಂದಿಗಳ ರಕ್ಷಣೆಗೆ ಆದ್ಯತೆ ನೀಡಲು ಸೂಚಿಸಲಾಗಿದ
ಗುಣಮಟ್ಟದ ರೇಷ್ಮೆ ಸೀರೆ ತಯಾರಿಕೆಯಲ್ಲಿ ಕೆಎಸ್‌ಐಸಿ ಮುಂಚೂಣಿಯಲ್ಲಿದೆ. ಜಾಗತಿಕ ಮನ್ನಣೆ ಪಡೆದಿರುವ ರೇಷ್ಮೆ ಸೀರೆಗೆ ಸದಾ ಬೇಡಿಕೆ ಇದೆ. ಇದರಿಂದಾಗಿ ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆಡೆ ಔಟ್‌ಲೆಟ್‌ಗಳನ್ನು ತೆರೆದಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಅಲ್ಲದೆ ನಿಗಮದ ಆದಾಯ ಕೂಡ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.
ಜನವರಿ 18ರಂದು ನಿಗಮದ ವಿಶೇಷ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಔಟ್‌ಲೆಟ್ ತೆರೆಯುವ ಸಂಬಂಧ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಜಯ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.