ಶಿವಮೊಗ್ಗ: ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಇಲ್ಲದ ಆರೋಪ ಮಾಡುತ್ತಿದೆ ಎಂದು ಜಾತ್ಯಾತೀತ ಜನತಾದಳ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಮಾರಣ್ಣ ಅವರಿಗೆ ಹೆಣ್ಣುಮಕ್ಕಳ ಬಗ್ಗೆ ಅಪಾರವಾದ ಗೌರವವಿದೆ. ಗ್ಯಾರಂಟಿಗಳಿಂದ ಮಹಿಳೆಯರು ದಾರಿತಪ್ಪುತಿದ್ದಾರೆ ಎಂದು ಅವರು ಹೇಳಿರುವುದನ್ನು ಅಪಾರ್ಥ ಮಾಡಿ ಬಿಂಬಿಸಲಾಗುತ್ತಿದೆ. ಮಹಿಳೆಯರ ಬಾಳು ಹಾಳಾಗಬಾರದೆಂದು ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿರುವ ಕುಮಾರ ಸ್ವಾಮಿ ಅವರು, ಮಹಿಳೆಯರ ಘನತೆಗೆ ತಕ್ಕ ಆಡಳಿತ ನೀಡಿದ್ದಲ್ಲದೆ, ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿನ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ.
ಮೂಲ ಸೌಕರ್ಯಗಳನ್ನು ತಲುಪಿಸುವಲ್ಲಿ ವಿಫಲವಾಗಿದೆ.ಇವುಗಳನ್ನು ಮುಚ್ಚಿಕೊಳ್ಳಲು ಚುನಾವಣೆ ಹೊತ್ತಲ್ಲಿ ವಿಷಯಾಂತರ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಇಲ್ಲದ ಆರೋಪ ಮಾಡಿ ನಮ್ಮ ಪಕ್ಷದ ನಾಯಕರ ತೇಜೋವಧೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ನಡೆ ಖಂಡನೀಯ. ಇದನ್ನೇ ನೆವವಾಗಿಟ್ಟುಕೊಂಡು ನಮ್ಮ ಮಿತ್ರಪಕ್ಷಗಳು ನಡೆಸುತ್ತಿದ್ದ ಕಾರ್ಯಕ್ರಮದ ವೇದಿಕೆಗೆ ಕಾಂಗ್ರೆಸ್ ಪಕ್ಷದ ಮಹಿಳೆಯರು ನುಗ್ಗಿ ಘೋಷಣೆ ಕೂಗಿರುವುದು ಸರಿಯಲ್ಲ. ಕಾಂಗ್ರೆಸ್ ಪ್ರವೃತ್ತಿ ಇದೇ ರೀತಿ ಮುಂದುವರಿದರೆ, ಜೆಡಿಎಸ್ ಪಕ್ಷದ ಮಹಿಳೆರೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗೀತಾ ಸತೀಶ್ ಎಚ್ಚರಿಕೆ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ:
ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಅ.೧೮ ರಂದು ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮಕ್ಕೆ ಪಕ್ಷದ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗೀತಾ ಅವರು ಮನವಿ ಮಾಡಿದ್ದಾರೆ.