ಭದ್ರಾವತಿ ತಾಲೂಕು ವ್ಯಾಪ್ತಿಯ ಮೂವರು ಪಿಡಿಒಗಳನ್ನು ಅಮಾನತುಗೊಳಿಸಿ ಜಿಪಂ ಸಿಇಒ ಎಂ.ಎಲ್. ವೈಶಾಲಿ ಅವರು ಆದೇಶಿಸಿದ್ದಾರೆ.
ತಾಲೂಕಿನ ಕಾಗೆಕೋಡಮಗ್ಗಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಶ್ರೀಧರ ನಾಯ್ಕ್, ಕೂಡ್ಲಗೆರೆ ಪ್ರಭರ ಪಿಡಿಒ ಸತೀಶ್ ಗೌಡ.ಪಿ, ಕಂಬದಾಳ ಪ್ರಭಾರ ಪಿಡಿಒ ಅಹ್ಮದ್ ಅಲಿಯವರನ್ನು ಕರ್ತವ್ಯದಲ್ಲಿ ನಿರ್ಲಕ್ಷತೆ ಹಾಗೂ ಉದಾಸೀನತೆ ತೋರಿರುವ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಜನವರಿ 5 ರಂದು ನಡೆದ ಪಂಚಾಯಿತಿ ಅಭಿವೃದ್ಧಿ ಪರಿಶೀಲನೆ ಸಭೆಯಲ್ಲಿ, ಈ ಮೂವರು ಅಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಸೂಚಿಸಲಾಗಿದ್ದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗದೆ ಉದಾಸೀನತೆ ಮತ್ತು ನಿರ್ಲಕ್ಷತನ ತೋರಿರುವ ಹಿನ್ನಲೆಯಲ್ಲಿ ಅಮಾನತುಗೊಳಿಸಿದ್ದಾರೆನ್ನಲಾಗಿದೆ.
ಅಮಾನತಿನ ಹಿನ್ನೆಲೆ:
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವಚ್ಛ ಸಂಕೀರ್ಣ ಘಟಕಗಳು, ಪಾಳು ಬಿದ್ದ ಕಟ್ಟಡ ಹಾಗೂ ಪಾಳು ಬಿದ್ದ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದ್ದು, ಈ ಎಲ್ಲಾ ಕಟ್ಟಡಗಳನ್ನ ತೆರವುಗೊಳಿಸುವಂತೆ, ಗ್ರಾಮಗಳ ಕಸ ವಿಲೇವಾರಿಯೂ ಸಹ ಸೇರಿದಂತೆ ಒಟ್ಟು 7 ಸೂಚನೆಗಳನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಿಂದ ಸೂಚಿಸಲಾಗಿತ್ತು. ಈ ಸೂಚನೆಗಳನ್ನ ಮೂರು ಅಧಿಕಾರಿಗಳು ಪಾಲಿಸುವಲ್ಲಿ ನಿರ್ಲಕ್ಷತನವನ್ನು ತೋರಿರುವ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದುಬಂದಿದೆ.