ಬೆಂಗಳೂರು, ಏ.09:
ರಾಜ್ಯ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಪರವಾಗಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಸಂದೇಶವನ್ನು ಫಾರ್ವರ್ಡ್ ಮಾಡಿದ್ರೂ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಸತ್ಯ ಗೊತ್ತಿದ್ರೂ ಹಾಸನದ ನೌಕರನೊಬ್ಬ ಯಾವುದೋ ಪಕ್ಷದ ಪರವಾಗಿ ಪ್ರಚಾರ ಮಾಡಿ ಅಮಾನತಾಗಿರುವ ಘಟನೆ ನಡೆದಿದೆ.
ಹಾಸನದ ಡಿಡಿಪಿಐ ಕಚೇರಿಯಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಬಿ.ಹೆಚ್ ಮಂಜುನಾಥ್ ಎಂಬುವರು ಬಿಜೆಪಿ ಪರವಿದ್ದಂತಹ ಸಂದೇಶವೊಂದನ್ನು ಪ್ರೀತಂ ಜೆ ಗೌಡ, ಹಾಸನ ಎಂಎಲ್ಎ ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾರೆ.
ಹೀಗೆ ಸರ್ಕಾರಿ ಅಧಿಕಾರಿಯಾಗಿದ್ದೂ, ಬಿಜೆಪಿ ಪರವಾಗಿದ್ದಂತ ಸಂದೇಶ ಫಾರ್ವರ್ಡ್ ಮಾಡಿದ್ದಕ್ಕೆ ಮಂಜುನಾಥ್ ವಿರುದ್ಧ ನಾಗೇಂದ್ರ ಎಂಬುವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಬಿಹೆಚ್ ಮಂಜುನಾಥ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಂದಹಾಗೇ 24 ಗಂಟೆಯೊಳಗೆ ಡಿಸಿಪಿಐಗೆ ಮಾಹಿತಿ ಒದಗಿಸಿ ಎಂದು ಎಡಿಸಿ ಶಾಂತಲಾ ಅವರು ಮಂಜುನಾಥ್ ಗೆ ನೋಟಿಸ್ ನೀಡಿದ್ದರು. ಅದರಂತೆ ಡಿಡಿಪಿಐ ಮಂಜುನಾಥ್ ವಿವರಣೆ ಕೇಳಿದ್ದರು. ಅವರ ವಿವರಣೆಯ ವರದಿಯನ್ನು ಸಹಾಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಈ ವರದಿ ಆಧರಿಸಿ, ಪ್ರಥಮ ದರ್ಜೆ ಸಹಾಯಕ ಬಿಹೆಚ್ ಮಂಜುನಾಥ್ ಅನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.