ಶಿವಮೊಗ್ಗ,ಏ.08: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ನಟ ಶಿವರಾಜ್ ಕುಮಾರ್ ಅವರು ಏಪ್ರಿಲ್ 9ರಂದು ಮಂಗಳವಾರ ಸಂಜೆ 5 ಗಂಟೆಗೆ ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿಯಲ್ಲಿನ ಯುಗಾದಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಲಂಬಾಣಿ ಸಮುದಾಯದ ಪ್ರಮುಖ ಹಬ್ಬ ‘ಆಟಮ್’ ಯುಗಾದಿ ಹಬ್ಬ ಆಚರಣೆಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಶಿವಣ್ಣ ದಂಪತಿ ಭಾಗವಹಿಸಲಿದ್ದಾರೆ. ಬಂಜಾರ ಸಮುದಾಯದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗ್ರಾಮಕ್ಕೆ ಆಗಮಿಸುವ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರಿಗೆನ್ನು ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು.
ಬಳಿಕ ಅವರು ಸೇವಾಲಾಲ್ ದೇವಾಲಯ ಸೇರಿದಂತೆ ಗ್ರಾಮದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದೇವರ ದರ್ಶನದ ಬಳಿಕ ಆಟಮ್ ಹಬ್ಬದ ಆಚರಣೆ ಸಂಪ್ರದಾಯ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಆಗಮಿಸುತ್ತಿರುವುದು ಊರಿನ ಜನರ ಸಂಭ್ರಮ ಇಮ್ಮಡಿಕೊಳ್ಳುವಂತೆ ಮಾಡಿದೆ.
ಅದರಲ್ಲಿಯೂ ಕುಂಚೇನಹಳ್ಳಿಯಲ್ಲಿ ಲಂಬಾಣಿ ಸಮುದಾಯದ ವಿಶೇಷ ಆಟಮ್ ಯುಗಾದಿ ಆಚರಣೆಯಲ್ಲಿ ದಂಪತಿ ಭಾಗವಹಿಸುತ್ತಿರುವುದು ಗ್ರಾಮದ ಜನರ ನಿರೀಕ್ಷೆ ಹೆಚ್ಚಿಸಿದೆ. ಶಿವಣ್ಣ ದಂಪತಿ ಆಗಮನದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.