ಶಿವಮೊಗ್ಗ,ಏ.04: ಬಿ.ವೈ.ರಾಘವೇಂದ್ರ ಸುಳ್ಳಿನ ಸರದಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಟೀಕಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಿ.ವೈ.ರಾಘವೇಂದ್ರ ಅವರು 4 ಬಾರಿ ಸಂಸದರಾಗಿದ್ದರೂ ಸಹ ಬಗೆಹರಿಸದೆ, ಈಗ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸುಳ್ಳಿನ ಸರದಾರರಾಗಿರುವ ಅವರಿಗೆ ರಾಷ್ಟಪ್ರಶಸ್ತಿ ನೀಡಬೇಕಾಗಿದೆ ಎಂದು ಕುಟುಕಿದರು.
ರೈತರ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡಿದವರು, ಬಿ.ಎಸ್.ಯಡಿಯೂರಪ್ಪನವರು ಎಂದು ರಾಘವೇಂದ್ರ ಹೇಳುತ್ತಾರೆ. ಆದರೆ ಅವರಿಗೆ ಗೊತ್ತಿರಲಿ ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪನವರು ರೈತರಿಗೆ ಉಚಿತ ಕರೆಂಟ್ ನೀಡಿದವರು. ಅವರು ಮತಯಾಚನೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಎದುರು ಈ ಮಾತು ಹೇಳಲಿ ಎಂದ ಅವರು, ಹಾಗಾಗಿಯೇ ಇವರು ಅತ್ಯಂತ ಸುಳ್ಳುಗಾರ ಎಂದರು.
ಬಿ.ಎಸ್.ಯಡಿಯೂರಪ್ಪನವರನ್ನು ಬೀದಿಗೆ ತಂದವರು ನಾವಲ್ಲ ನಿಮ್ಮದೇ ಪಕ್ಷದವರು. ಒದ್ದು ಮೇಲೇ ಬರುವ ಸಂಸ್ಕೃತಿ ನನ್ನದಲ್ಲ, ಅದು ರಾಘವೇಂದ್ರ ಅವರದು ಎಂದರು.
ಕಾಂಗ್ರೆಸ್ ನಿಂದ ಬೈಂದೂರು ಸೇರಿದಂತೆ ಎಲ್ಲ ಕಡೆ ಹಠ ತೊಟ್ಟು ಚುನಾವಣೆ ಮಾಡಲಾಗುತ್ತಿದೆ. ಸುಕುಮಾರ್ ಶೆಟ್ಟಿ, ಗೋಪಾಲ್ ಪೂಜಾರಿ ಓಡಾಟ, ಕೆಲಸ ಅದ್ಭುತವಾಗಿ ಮಾಡ್ತಿದಾರೆ. ಮಾಧ್ಯಮದ ಜೊತೆಗೆ ನಾವು ಹೇಳಿದ್ದನ್ನು ಮತದಾರರ ಬಳಿಯೂ ಒಯ್ಯಬೇಕು. ತಾಲ್ಲೂಕು ಮಟ್ಟದ ಸಭೆಗಳೆಲ್ಲ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ ಯೋಜನೆ ರೂಪಿಸ್ತಿದೀವಿ. ಗೀತಕ್ಕ ಗ್ರಾ.ಪಂ.ಮಟ್ಟದಲ್ಲೂ ಪ್ರಚಾರ ಮಾಡ್ತಿದಾರೆ ಎಂದರು.
ಮತದಾರರ ಬಳಿ ಹೆಚ್ಚು ಹೆಚ್ಚಾಗಿ ಶಿವರಾಜ್ ಕುಮಾರ್ ಓಡಾಡ್ತಿದಾರೆ. ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಉತ್ತರ ಸಿಗುತ್ತೆ. ದೇಶದಲ್ಲೇ ಬದಲಾವಣೆ ಗಾಳಿ ಬೀಸ್ತಿದೆ. ಸೋಷಿಯಲ್ ಮೀಡಿಯಾಗಳ ರೆಸ್ಪಾನ್ಸ್ ನೋಡಿದ್ರೆ ಬಿಜೆಪಿ ಸೋಲುತ್ತೆ ಎಂದರು.
ಪ್ರತಿ ಗ್ರಾ.ಪಂ.ಮಟ್ಟದಲ್ಲೂ ಪ್ರಚಾರದ ಕಾರ್ಯ ಮಾಡಲಾಗುತ್ತಿದೆ. ಹೋದಕಡೆಯೆಲ್ಲಾ ವಾತಾವರಣ ಚೆನ್ನಾಗಿದೆ. ಹಠ ಮತ್ತು ಛಲದಿಂದ ಪ್ರಚಾರ ಭರದಿಂದ ಸಾಗುತ್ತಿದೆ ಎಂದರು.
ಗೀತಾ ಶಿವರಾಜ್ಕುಮಾರ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಮಧುಬಂಗಾರಪ್ಪ ತಿಳಿಸಿದರು.
ದೇಶದಲ್ಲೂ ಬದಲಾವಣೆಯಾಗಲಿದೆ, ಬಿಜೆಪಿ ಬಿಟ್ಟು ಬೇರೆ ಪಕ್ಷಗಳ ಕಡೆ ಮತದಾರ ಒಲವು ತೋರಿಸುತ್ತಿದ್ದಾನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಮತ ಕೇಳಲು ಖುಷಿಯಾಗುತ್ತಿದೆ ಎಂದರು.
ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ಬಿ.ವೈ.ರಾಘವೇಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಬಿಡಬೇಕು ಎಂದರು.
ಏ.15ರಂದು ಗೀತಾಶಿವರಾಜ್ಕುಮಾರ್ ರವರು ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣ ಗೆ ಮೂಲಕ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ನಟ ಶಿವರಾಜ್ಕುಮಾರ್, ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡರು ಭಾಗವಹಿಸುವರು ಎಂದ ಅವರು, ಡಿಫಾಸಿಟ್ ಹಣವನ್ನು ಮಹಿಳೆಯರು ಭರಿಸಲಿದ್ದಾರೆ ಎಂದರು. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮತ ಬರಲಿದೆ ಎಂದರು.
ತೀರ್ಥಹಳ್ಳಿ ಶಾಸಕ ಆರಗಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಗ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ. ಈವ ಅವರೇ 420 ಆರಗಜ್ಞಾನೇಂದ್ರ ಆಗಿದ್ದಾರೆ ಎಂದರು.
ಭಾರತ್ ಅಕ್ಕಿ ಎಲ್ಲಿ ಹೋಯ್ತು? ಸಂಸದರೇ ಹೇಳಿ. ಬಡವರ ಹೊಟ್ಟೆಗೆ ತಲುಪುತ್ತಿರೋದು ಸಿದ್ದರಾಮಯ್ಯರ ಅಕ್ಕಿ. ಕಾಂಗ್ರೆಸ್ ಗ್ಯಾರಂಟಿಗಳೇ ಕೊನೆಗೆ ಉಳಿಯುವುದು ಎಂದರು.
ಚೇಲಾ ಎಂದು ನಾನು ಬಳಕೆಯೇ ಮಾಡಿಲ್ಲ, ಆದರೆ ನಾನು ಹೇಳಿದ್ದೇನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಜಿ.ಡಿ.ಮಂಜುನಾಥ್, ರಮೇಶ್ ಹೆಗ್ಡೆ, ಶಾಂತವೀರನಾಯ್ಕ್, ಸುರೇಶ್ ಶೆಟ್ಟಿ ಯು.ಶಿವಾನಂದ, ಡಾ. ಶ್ರೀನಿವಾಸ್ ಕರಿಯಣ್ಣ, ಧರ್ಮರಾಜ್, ಎಸ್.ಟಿ.ಹಾಲಪ್ಪ, ಗಿರೀಶ್, ದೇವೀಕುಮಾರ್, ದಿನೇಶ್, ಮುಂತಾದವರು ಇದ್ದರು.