ಶಿವಮೊಗ್ಗ,ಏ.04: ಭದ್ರಾವತಿ ತಾಲ್ಲೂಕಿನ ಹುಣಸಿಕಟ್ಟೆ ಜಂಕ್ಷನ್ನಲ್ಲಿ ಬಹುಗ್ರಾಮ ಯೋಜನೆ ಕುಡಿಯುವ ನೀರನ್ನು ಅಕ್ರಮವಾಗಿ ತೋಟಕ್ಕೆ ಬಳಕೆ ಮಾಡಲಾಗುತ್ತಿದ್ದು, ಇದನ್ನು ಪ್ರಶ್ನಿಸಿದಕ್ಕೆ ನನ್ನ ಮಗನೇಲೆ ಹಲ್ಲೆ ಮಾಡಿ ನನಗೂ, ನನ್ನ ಮಗನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹುಣಸೆಕಟ್ಟೆ ಜಂಕ್ಷನ್ನ ನಿವಾಸಿಯಾದ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಪರಿಸರ ಶಿವರಾಮ್ ದೂರಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಬದಾಳ್ ಹೊಸೂರು ಮತ್ತು ಇತರೆ 21 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಹುಣಸೆಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಿಗೆ ಒಂದು ಲಕ್ಷ ಲೀಟರ್ ನೀರು ಹಂಚಿಕೆಯಾಗಿದೆ. ನೀರು ಸಾಲಾದ ಕಾರಣ ಪ್ರತಿ ಹಳ್ಳಿಗೆ 2-3 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಕುಡಿಯುವ ನೀರಿನ ಘಟಕದ ಟ್ಯಾಂಕ್ನಲ್ಲಿ ನೀರು ತುಂಬಿಸುತ್ತಿದ್ದು, ವಿರೂಪಾಕ್ಷಪ್ಪ ಎಂಬಾತ ತನ್ನ 6 ಎಕರೆ ಅಡಿಕೆ ತೋಟಕ್ಕೆ ರಾಜರೋಷವಾಗಿ ಟ್ಯಾಂಕ್ನಿಂದ ಪೈಪ್ ಮೂಲಕ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದರು.
ಇದನ್ನು ಪ್ರಶ್ನಿಸಿದ ನನ್ನ ಮಗ ಮೋಹನ್ಕುಮಾರ್ಗೆ ವಿರೂಪಾಕ್ಷಪ್ಪ ಅವಾಚ್ಯ ಶಬ್ದಗಳಿಂದ ನಿಂಧಿಸಿ ನಿಮ್ಮಪ್ಪ ಶಿವರಾಮ್ ಏನು ಮಾಡಿಕೊಳ್ಳುತ್ತಾರೆ ಎಂದು ಕಾಲಿನಿಂದ ಎದೆಗೆ ಹೊದ್ದು, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಸಮಯದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನೋಡಿ ಜಗಳ ಮಾಡಬೇಡಿ ಎಂದು ಮೋಹನ್ನನ್ನು ಕಳಿಸಿದ್ದು ಅಲ್ಲದೆ ವಿನಾಕಾರಣ ನನ್ನ ಮತ್ತು ಮಗನ ಮೇಲೆ ದೂರು ದಾಖಲಿಸಲಾಗಿದೆ ಎಂದು ದೂರಿದರು.
ವಿರೂಪಾಕ್ಷಪ್ಪ ಹುಣಸೆಕಟ್ಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ದತ್ತು ಹೆಸರಿನಲ್ಲಿ ಶಾಲೆಯ 24 ಗುಂಟೆ ಜಾಗವನ್ನು ತನ್ನ ಹಾಗೂ ತನ್ನ ಪತ್ನಿ ಹೆಸರಿಗೆ 2 ಸೈಟ್ ಮಾಡಿಸಿಕೊಂಡು ಶಾಲೆಯ ಶೌಚಾಲಯ ಕಟ್ಟಲು 3.70 ಲಕ್ಷ, ಶಾಲೆಗೆ ಸುಣ್ಣಬಣ್ಣಕ್ಕಾಗಿ 2 ಲಕ್ಷ, ಕಾಂಪೌಂಡ್ಗೆ 5 ಲಕ್ಷ ರೂ. ಕಂಬದಾಳ್ ಹೊಸೂರು ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಹಣ ಪಡೆದು ತಾನು ಮಾಡಿಕೊಂಡಿರುವ ಅಕ್ರಮ ಶಾಲೆ ಜಾಗಕ್ಕೆ ಕಾಂಪೌಂಡು ಕಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಶಾಲೆಯ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಕ್ರಮವಾಗಿ ಕಳಪೆ ಕಾಮಗಾರಿ ಮಾಡಿ ಅರ್ಧಕ್ಕೆ ಕೈಬಿಟ್ಟಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಿ ಶಾಲೆಯನ್ನು ದತ್ತು ಸ್ವೀಕಾರದಿಂದ ಮುಕ್ತಗೊಳಿಸಿ ಅಕ್ರಮ ದಾಖಲೆಗಳೊಂದಿಗೆ ಶಾಲಾ ಜಾಗವನ್ನು ಉಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ ಎಂದರು.
ವಿರೂಪಾಕ್ಷಪ್ಪನ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಮೂಲಕ ನನಗೂ ನನ್ನ ಕುಟುಂಬಕ್ಕೂ ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ಕುಮಾರ್ ಉಪಸ್ಥಿತರಿದ್ದರು.