ಶಿವಮೊಗ್ಗ: ವಿದ್ಯಾರ್ಥಿ ವೇತನಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಮೌಲ್ಯ ಹೆಚ್ಚಿಸಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್ಇಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ವತಿಯಿಂದ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಸಾಧಿಸುವ ಕನಸಿಗಿಂತ, ಗೆಲ್ಲುವ ಮನಸ್ಸು ಮಾಡಬೇಕಿದೆ. ಸಾಧನೆಯ ಜೊತೆಯಲ್ಲಿ ಇತರರನ್ನು ಗೆಲ್ಲಿಸುವ ಹಂಬಲ ನಮ್ಮದಾಗಬೇಕಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಯಲ್ಲಿ, ಮುಂದಿನ ದಿನಗಳಲ್ಲಿ ಇತರರಿಗೂ ಸಹಾಯ ಧನ ನೀಡುವ ಮನಸ್ಸು ನಿಮ್ಮದಾಗಲಿ ಎಂದು ಹಾರೈಸಿದರು.
ಎನ್ಇಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ಅಧ್ಯಕ್ಷರಾದ ಟಿ.ಆರ್.ಅಶ್ವಥ ನಾರಾಯಣಶೆಟ್ಟಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಸಣ್ಣ ಇಡಿಗಂಟಿನಿಂದ ಪ್ರಾರಂಭವಾಗಿ ಇಂದು ಒಟ್ಟು ಇಪ್ಪತ್ತು ಲಕ್ಷ ರೂಪಾಯಿವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.
ಇಪ್ಪತ್ತು ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ : ಈ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ವಿದ್ಯಾಸಂಸ್ಥೆಗಳ ಪ್ರಾಥಮಿಕದಿಂದ ಪದವಿಯ ವರೆಗಿನ 320 ವಿದ್ಯಾರ್ಥಿಗಳಿಗೆ ಒಟ್ಟು 20 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಎನ್.ಟಿ.ನಾರಾಯಣರಾವ್, ಅನಂತದತ್ತ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಲೆಕ್ಕಪತ್ರ ವಿಭಾಗದ ಸಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು.