ಶಿವಮೊಗ್ಗ: ಜನವರಿ 15ರ ಸಂಕ್ರಮಣದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಅವರಿಗೆ ಸಿಗಂದೂರು ದೇವಿಯ ಶಾಪವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾನು ಈ ಹಿಂದೆ ಸಿಗಂದೂರು ವಿಷಯಕ್ಕೆ ಮುಖ್ಯಮಂತ್ರಿಗಳು ಬಂದರೆ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿದ್ದೇ. ಅದರಂತೆ ಡಿನೋಟಿಫೈ ರೂಪದಲ್ಲಿ ಅವರಿಗೆ ಶಾಪ ತಟ್ಟಿದೆ. ಇಂತಹ ಆರೋಪಗಳು ಬಂದಾಗ ಸಹಜವಾಗಿ ಅವರು ರಾಜೀನಾಮೆ ಕೊಡಬೇಕು. ಏಕೆಂದರೆ ದಾಖಲೆಗಳನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದರು.


ಆದರೆ ನಾನು ಅವರ ರಾಜೀನಾಮೆಯನ್ನು ಕೇಳುವುದಿಲ್ಲ. ಏಕೆಂದರೆ ಅವರ ರಾಜೀನಾಮೆ ಕೇಳಲು ಅವರ ಪಕ್ಷದವರೇ ಇದ್ದಾರೆ. ಈಗಾಗಲೇ ಅವರನ್ನು ಕೆಳಗಿಳಿಸುವ ಸಂಚು ಅವರ ಪಕ್ಷದಲ್ಲಿಯೇ ನಡೆಯುತ್ತಿರುವಾಗ ನಾನೇಕೆ ರಾಜೀನಾಮೆ ಕೇಳಲಿ. ಕತ್ತಿ, ಕಟ್ಟಾ ಸುಬ್ರಮಣ್ಯ, ಯತ್ನಾಳ್ ಮುಂತಾದವರೆಲ್ಲ ಹೊಸದಾಗಿ ಮಾತನಾಡಲು ಆರಂಭಿಸಿದ್ದಾರೆ. ಹೊಸ ಪಕ್ಷ ಕಟ್ಟುವ ಸೂಚನೆಗಳು ಇರುವ ಹಾಗೆ ಕಾಣುತ್ತೆ. ಒಟ್ಟಾರೆ ನಾಯಕನ ಬದಲಾವಣೆಗೆ ಬಿಜೆಪಿ ಪಕ್ಷದೊಳಗೆಯೇ ಸಂಚಲನ ನಡೆಯುತ್ತಿರುವುದು ಸುಳ್ಳಲ್ಲ. ಹಾಗಾಗಿ ಸಂಕ್ರಮಣದ ನಂತರ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದರು.
ಯಡಿಯೂರಪ್ಪನವರಿಗೆ ಮತ್ತು ಅವರ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ. ವಿಶೇಷವಾಗಿ ಮುಖ್ಯಮಂತ್ರಿಗಳಿಗೆ ನೆನಪಿನ ಶಕ್ತಿಯೂ ಹೋಗಿದೆ. ವಯಸ್ಸೂ ಆಗಿದೆ. ಹಾಗಾಗಿ ಅವರು ಇನ್ನು ಮುಖ್ಯಮಂತ್ರಿಯಾಗಿ ಮುಂದುವರೆಯುವ ಸಾಧ್ಯತೆಯೂ ಇಲ್ಲ. ಯುವಕರನ್ನು ಕಡೆಗಾಣಿಸಿದರೆ ಅವರ ಪತನ ಖಚಿತ ಎಂದು ವ್ಯಂಗ್ಯವಾಗಿ ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಶಿಕಾರಿಪುರ ಸೇರಿದಂತೆ ಎಲ್ಲ ಕಡೆ ಭ್ರಷ್ಟಾಚಾರದ ಹಣ ಹಂಚಲಾಗಿದೆ. ಒಂದೊಂದು ಮತಕ್ಕೆ ೧೦ ಸಾವಿರದವರೆಗೆ ನೀಡಿದ್ದಾರೆ ಎಂದರೆ ಅದೆಷ್ಟು ಭ್ರಷ್ಟಾಚಾರದ ಹಣ ಇರಬಹುದು ಎಂದು ಊಹಿಸಿಕೊಳ್ಳಬಹುದು. ಆದರೂ ಇವರು ಗೆಲ್ಲುವುದಿಲ್ಲ ಎಂದರು.
ಹೊಸ ವರ್ಷದ ಆಚರಣೆಯನ್ನು ರದ್ದು ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರ ಹಿಂದೆ ಆರ್‌ಎಸ್‌ಎಸ್ ಅಜೆಂಡಾವಿದೆ. ಯುವಕರು ಹೊಸ ವರ್ಷವನ್ನು ಉಲ್ಲಾಸದಿಂದ ಆಚರಿಸುತ್ತಾರೆ. ಇದನ್ನು ಬೇಡ ಎನ್ನಲು ಇವರ‍್ಯಾರು. ಕೊರೋನಾ ಹಿನ್ನೆಲೆಯ ಕಾರಣವಂತೂ ಹೇಳುವ ಆಗಿಲ್ಲ. ಏಕೆಂದರೆ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿಲ್ಲವೇ. ನಾಮಪತ್ರ ಸಲ್ಲಿಸಲು ಸಾವಿರಾರು ಜನರು ಹೋಗಿರಲಿಲ್ಲವೇ. ಹೀಗಿದ್ದೂ ಹೊಸ ವರ್ಷ ಆಚರಣೆಗೆ ಏಕೆ ಹೀಗೆ ಮಾಡುತ್ತಾರೆ. ರಾಮಜಯಂತಿ ಮಾಡಲು ಒಪ್ಪುವ ಇವರು ಕ್ರಿಶ್ಚಿಯನ್ನರು ಇದರ ಆಚರಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಬೇಡ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ್ ಹುಲ್ತಿಕೊಪ್ಪ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!