ಸಾಗರ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರ ಸರ್ಕಾರ. ಬಡವರು, ಕೂಲಿಕಾರ್ಮಿಕರು, ಜನಸಾಮಾನ್ಯರ ಬಗ್ಗೆ ಸದಾ ಯೋಜನೆ ರೂಪಿಸುವ ದೇಶದ ಮೊದಲ ಸರ್ಕಾರ ನಮ್ಮ ಸರ್ಕಾರವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಬೆಳಲಮಕ್ಕಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಜ್ಯ ಸರ್ಕಾರದ ಮಕ್ಕಳಿಗೆ ಸಿರಿಧಾನ್ಯ ಮಾಲ್ಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಮಕ್ಕಳಿಗೆ ಹಾಲು, ಮೊಟ್ಟೆ, ಚಿಕ್ಕಿ ಜೊತೆ ಇಂದಿನಿಂದ ಸಿರಿಧಾನ್ಯಗಳ ಮಾಲ್ಟ್ ನೀಡಲಾಗುತ್ತದೆ ಎಂದರು.
ಬೇಸಿಗೆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಪೋಷಕರಿಗೆ ಸವಾಲು ಎನಿಸುತ್ತದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ನೀಡುತ್ತಿದೆ. ರಾಜ್ಯ ಸರ್ಕಾರದ ಜನಪರ, ವಿದ್ಯಾರ್ಥಿ ಯುವಜನರ ಪರ ಜಾರಿಗೆ ತರುತ್ತಿರುವ ಯೋಜನೆ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ರಾಗಿಮಾಲ್ಟ್ ಯೋಜನೆಯನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕ್ಷೇತ್ರವ್ಯಾಪ್ತಿಯಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗಿದೆ. ಶಾಸಕರ ಮಾದರಿ ಶಾಲೆಯ ಅಭಿವೃದ್ದಿಗೆ ಶಾಲಾಭಿವೃದ್ದಿ ಸಮಿತಿ ನೀಡಿರುವ ಮನವಿಯನ್ನು ಪರಿಗಣಿಸಲಾಗಿದ್ದು ಹೊಸ ಪೀಠೋಪಕರ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ಜೊತೆ ಕ್ರಿಯಾಶೀಲ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಅಕ್ಷರ ಕೆ.ಬಿ. ಮಾತನಾಡಿ, ರಾಜ್ಯದಾದ್ಯಂತ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ಇಂದಿನಿಂದ ಸಿರಧಾನ್ಯಗಳ ಮಾಲ್ಟ್ ನೀಡಲಾಗುತ್ತದೆ. ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸುವುದು ಸೇರಿದಂತೆ ನೆನಪಿನಶಕ್ತಿ ಸಹ ರಾಗಿಮಾಲ್ಟ್ ಸೇವನೆಯಿಂದ ಹೆಚ್ಚುತ್ತದೆ. ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಯತೀಶ್ ಆರ್., ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಕೆ.ಹೊಳೆಯಪ್ಪ, ಸತೀಶ ಕುಮಾರ್, ಪೂರ್ಣಿಮಾ, ಹನೀಫ್, ಗುರುರಾಜ್ ಇನ್ನಿತರರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಸ್ವಾಗತಿಸಿ, ಜಯಮ್ಮ ಕಾರ್ಯಕ್ರಮ ನಿರೂಪಿಸಿದರು.