ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ ವನ್ಯಜೀವಿಗಳಲ್ಲಿ ವಿವಿಧ ಸಮಸ್ಯೆಗಳಲ್ಲಿ ಇತ್ತೀಚಿನ ಆವಿಷ್ಕಾರಗಳು ” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಿದ್ದು, ಇದರಲ್ಲಿ ವನ್ಯ ಜೀವಿಗಳ ವಿವಿಧ ವಿಷಬಾಧೆಗಳು ಮತ್ತು ವಿವಿಧ ಕಾಯಿಲೆಗಳು ಮತ್ತು ಅವುಗಳ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 32 ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸನ್ನ ಕೃಷ್ಣ ಪಟಗಾರ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ವಿಭಾಗ, ಶಿವಮೊಗ್ಗ ಮಾತನಾಡುತ್ತಾ, ಕ್ಷೇತ್ರ ಮಟ್ಟದಲ್ಲಿರುವ ಪಶುವೈದ್ಯರು ಅನೇಕ ಸಲ ಅರಣ್ಯ ಇಲಾಖೆಯ ಜೊತೆ ವನ್ಯಜೀವಿಗಳು ಮತ್ತು ಮಾನವ ಸಂಘರ್ಷದಲ್ಲಿ ಪ್ರಾಣಿಗಳ ಒಳಿತಿಗಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು ಅವರ ಜ್ಞಾನದ ಉನ್ನತಿಗೆ ಕಾರ್ಯಾಗಾರ ಸಹಕಾರ ನೀಡಲಿದೆ ಎಂದರು. ಡಾ: ಬಸವೇಶ್ ಹೂಗಾರ್, ಉಪನಿರ್ದೇಶಕರು, ಪಾಲಿಕ್ಲಿನಿಕ್, ಶಿವಮೊಗ್ಗ ಇವರು ಮಾತನಾಡಿ ಇತ್ತೀಚೆಗೆ ಮೃಗ-ಮಾನವ ಸಂಘರ್ಷ ಜಾಸ್ತಿಯಾಗುತ್ತಿರುವುದರಿಂದ ಚಿಕಿತ್ಸೆಗೆ ಒಳಪಡುವ ವನ್ಯಜೀವಿಗಳ ಸಂಖ್ಯೆಯೂ ಸಹ ಜಾಸ್ತಿಯಾಗುತ್ತಿದ್ದು ಪಶುವೈದ್ಯರು ಈ ಕುರಿತು
ಸನ್ನದ್ಧರಾಗಬೇಕೆಂದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್ರವರಾದ ಡಾ: ಕೆ.ಗಣೇಶ ಉಡುಪ ಮಾತನಾಡುತ್ತಾ ವನ್ಯಜೀವಿಗಳ ರಕ್ಷಣೆ ಮತ್ತು ಚಿಕಿತ್ಸೆಯಲ್ಲಿ ಕ್ಷೇತ್ರ ಮಟ್ಟದ ಪಶುವೈದ್ಯರು ಅನೇಕ ಸವಾಲುಗಳನ್ನು ಹೊಂದಿದ್ದು ಇದನ್ನು ಎದುರಿಸಲು ವಿಶ್ವವಿದ್ಯಾಲಯವು ವಿವಿಧ ತರಬೇತಿಗಳ ಮೂಲಕ ಪಶುವೈದ್ಯರನ್ನು ಸಿದ್ಧಗೊಳಿಸುತ್ತಿದೆ ಎಂದರು.
ಡಾ: ಸುನಿಲಚಂದ್ರ ಕಾರ್ಯಕ್ರಮ ನಿರೂಪಿಸಿದರೆ, ಡಾ: ಕವಿತಾ ರಾಣಿ, ಡಾ:ಜಯಾ ಲಕ್ಕುಂಡಿ, ಡಾ: ಮಂಜುನಾಥ್, ಡಾ: ಮಂಜು, ಡಾ: ಪ್ರಶಾಂತ್, ಡಾ:ಸಂತೋಷ್ ಶಿಂಧೆ, ಡಾ:ಯೋಗೀಶ್, ಡಾ:ಚೇತನ್ ಶರ್ಮ, ಡಾ:ಅರುಣ್, ಡಾ:ವಿನಯ್, ಡಾ:ಮುರಳಿ ಮನೋಹರ್, ಡಾ:ಕ್ಷಮಾ, ಡಾ:ರವಿಕುಮಾರ್ ಇವರೆಲ್ಲಾ ವಿಷಯ ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.