ಸಾಗರ : ಕಾಂಗ್ರೇಸ್ ವರಿಷ್ಟ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರು ಓಬಿಸಿಗೆ ಸೇರಿದವರಲ್ಲ ಎಂದು ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಓಬಿಸಿ ಮೋರ್ಚಾದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್, ಕಾಂಗ್ರೇಸ್ ಪಕ್ಷದವರು ತೀವೃ ಹತಾಶೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯವರ ಜನಪ್ರಿಯತೆ ಸಹಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ..
ಜಾತಿನಿಂದನೆ ಮಾಡಿ, ಸುಳ್ಳು ಆರೋಪವನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊರೆಸಿ ಅವರ ಜನಪ್ರಿಯತೆ ಕುಗ್ಗಿಸಬಹುದು ಎನ್ನುವ ಕಾಂಗ್ರೇಸ್ ಕನಸು ಯಾವತ್ತೂ ನನಸಾಗುವುದಿಲ್ಲ. ಈ ಬಾರಿ ಸಹ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯಲಿದೆ. ಸುಳ್ಳು ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಕೆ.ಎಸ್.ಪ್ರಶಾಂತ್ ಮಾತನಾಡಿ, ಕಾಂಗ್ರೇಸ್ ಜಾತಿಯನ್ನು ಆಧರಿಸಿ ಚುನಾವಣೆಯನ್ನು ಗೆಲ್ಲಬೇಕು ಎನ್ನುವ ಸಂಕಲ್ಪ
ಕೈಗೊಂಡಂತೆ ಕಾಣುತ್ತಿದೆ. ಕಳೆದ ಹತ್ತುವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ದಿ ಕೆಲಸಗಳು ಕಳೆದ ೬೫ ವರ್ಷದಲ್ಲಿ ನಡೆದಿರಲಿಲ್ಲ. ಇದೀಗ ರಾಹುಲ್ ಗಾಂಧಿ ಹತಾಶರಾಗಿ ನರೇಂದ್ರ ಮೋದಿಯವರ ಜಾತಿ ಬಗ್ಗೆ ವಿಶ್ಲೇಷಣೆಗೆ ಇಳಿದು ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ನರೇಂದ್ರ ಮೋದಿಯವರಿಗೆ ಅಗೌರವ ತರಿಸುವ ರೀತಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ದೇಶವಾಸಿಗಳ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ನರೇಂದ್ರ ಮೋದಿ ವಿಶ್ವವೇ ಮೆಚ್ಚುವ ನಾಯಕರಾಗಿ ಹೊರಹೊಮ್ಮಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ರಾಹುಲ್ ಗಾಂಧಿ ಪದೇಪದೇ ಮೋದಿಯವರಿಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ದೇಶದ ಜನರಿಗೆ ನರೇಂದ್ರ ಮೋದಿಯವರ ವ್ಯಕ್ತಿತ್ವ ಪರಿಚಯವಿದ್ದು ರಾಹುಲ್ ಗಾಂಧಿ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.
ಕೆ.ಆರ್.ಗಣೇಶಪ್ರಸಾದ್, ಶ್ರೀನಿವಾಸ್ ಮೇಸ್ತ್ರಿ ಮಾತನಾಡಿದರು. ಪ್ರಮುಖರಾದ ಆನಂದ ಜನ್ನೆಹಕ್ಲು, ಅರುಣ ಕುಗ್ವೆ, ಸತೀಶ್, ಸವಿತಾ ವಾಸು, ಪ್ರೇಮಾ ಸಿಂಗ್, ಅಕ್ಷರ, ಕೃಷ್ಣ ಶೇಟ್ ಇನ್ನಿತರರು ಹಾಜರಿದ್ದರು.