ಶಿವಮೊಗ್ಗ, ಜ.08:
ರಾಜ್ಯೋತ್ಸವ ಸಂಭ್ರಮದಲ್ಲಿ ಸಾಧಕರಿಗೆ ಸನ್ಮಾನ ಶ್ಲಾಘನೀಯ ಕಾರ್ಯ ಎಂದು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ನಗರದ ಶೀನಪ್ಪಶೆಟ್ಟಿ (ಗೋಪಿ) ವೃತ್ತದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗೆಳೆಯರ ಬಳಗ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಗೆಳೆಯರ ಬಳಗದ 13 ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂಘಟನೆಗಳು ಕನ್ನಡ ಭಾಷೆ-ಧರ್ಮ- ಆಚಾರ ವಿಚಾರಗಳನ್ನು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಅವರು ಮಾತನಾಡುತ್ತಾ, ಕಳೆದ 13 ವರ್ಷಗಳಿಂದ ಗೆಳೆಯರ ಬಳಗದಿಂದ ರಾಜ್ಯದಲ್ಲಿ ವಿಶೇಷವಾಗಿ ಶಿವಮೊಗ್ಗದಲ್ಲಿ ಸಾಕಷ್ಟು ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಅಂತೆಯೇ ಪ್ರತಿ ವರ್ಷ ರಾಜ್ಯೋತ್ಸವದ ಸಂಭ್ರಮವನ್ನು ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮೂಲಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿಶ್ವಾಸ್, ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ಮಹಿಳಾ ಅಧ್ಯಕ್ಷೆ ಉಷಾ, ಬಳಗದ ಸರ್ವ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಗೌರವಧನವನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಜಿ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಮತ್ತು ತಂಡದವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿತು.