ಶಿವಮೊಗ್ಗ : ಭದ್ರಾ ಜಲಾಶಯದ ಎಡದಂಡ ನಾಲೆಗೆ ಜ.10 ರಿಂದ ಮತ್ತು ಬಲದಂಡ ನಾಲೆ ಜ.20 ರಿಂದ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಇಂದು ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 2023-24 ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಎಡದಂಡ ನಾಲೆಗೆ ಜ.10 ರಿಂದ ನೀರು ಹರಿಸಲಾಗುತ್ತಿದ್ದು, ಆನ್ ಮತ್ತು ಆಫ್ ಮಾದರಿ ಅನುಸರಿಸಲಾಗುವುದು. ಜ.10 ರಿಂದ 16 ದಿನ ಆನ್ ಮತ್ತು 15 ದಿನ ಆಫ್, ನಂತರ 17 ದಿನ ಆನ್, 15 ದಿನ ಆಫ್, 18 ದಿನ ಆನ್ 15 ದಿನ ಆಫ್ ಮತ್ತು 20 ದಿನ ಆನ್, 15 ದಿನ ಆಫ್ ಇರುತ್ತದೆ.
ಬಲದಂಡ ನಾಲೆಗೆ ಜ.20 ರಿಂದ ನೀರು ಹರಿಸಲಾಗುತ್ತಿದ್ದು ಮೊದಲಿಗೆ 12 ದಿನ ಆನ್, 20 ದಿನ ಆಫ್, 12 ದಿನ ಆನ್ 20 ದಿನ ಆಫ್, 14 ದಿನ ಆನ್ 20 ದಿನ ಆಫ್ ಮತ್ತು 15 ದಿನ ಆನ್ 20 ದಿನ ಆಫ್ ಇರುತ್ತದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದೆ. ಜಲಾಶಯದ ಗರಿಷ್ಟ ನೀರಿನ ಸಂಗ್ರಹಣಾ ಮಟ್ಟ 186 ಅಡಿ, ಪ್ರಸ್ತುತ 35.370 ಅಡಿ ಸಂಗ್ರಹವಿದೆ. ಪ್ರಸ್ತತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ 12.50 ಟಿಎಂಸಿ ಪ್ರಮಾಣದ ನೀರನ್ನು ಬಲದಂಡ ನಾಲೆಗೆ 2650 ಕ್ಯೂಸೆಕ್ಸ್ ಮತ್ತು ಎಡದಂಡ ನಾಲೆಗೆ 380 ಕ್ಯೂಸೆಕ್ಸ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ 0.27 ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು 47 ದಿನಗಳಿಗೆ ನೀರು ಹರಿಸಬಹುದಾಗಿದೆ.
ಪ್ರಸ್ತತ ಚಳಿ ಇದ್ದು ವಾತಾವರಣ ತಂಪಿದೆ. ಮಾರ್ಚ್ ನಂತರ ಬೇಸಿಗೆ ಹೆಚ್ಚಲಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಕಟ್ಟಕಡೆಯ ಅಚ್ಚುಕಟ್ಟುದಾರರ ಅನುಕೂಲವನ್ನೂ ಪರಿಗಣಿಸಿ ಈಗ ಸ್ವಲ್ಪ ತಡವಾಗಿ ನೀರು ಹರಿಸುವ ಬಗ್ಗೆ ಅಧಿಕಾರಿಗಳು, ರೈತರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ಹಾಗೂ ನೀರಿನ ಅಭಾವವಿರುವ ಕಾರಣ ಪ್ರಸ್ತುತ ರೈತರು ಭತ್ತ ಬೆಳೆದಿದ್ದರೆ ಒಳಿತು ಎಂದರು.
ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಮುಂಬರುವ ಮಾನ್ಸೂನ್ ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ನೀರು ನೀಡಲು ಅನುಕೂಲವಾಗುವಂತೆ ನೀರು ವಿತರಣೆಯ ಯೋಜನೆ ಹಾಕಿಕೊಳ್ಳಬೇಕು. ಬೇಸಿಗೆಗೆ ನೀರು ಪೂರೈಕೆಯಾಗುವಂತೆ ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ಭತ್ತ ಬೆಳೆಯದಿರುವಂತೆ ರೈತರಿಗೆ ಸೂಚನೆ ನೀಡಲಾಗಿದೆ.
ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಮೇ 15 ರವರೆಗೆ ನೀರು ಬೇಕೇ ಬೇಕು. 47 ದಿನಗಳಿಗೆ ಆಗಬಹುದಾದ ನೀರನ್ನು ಸಮರ್ಪಕವಾಗಿ ನೀಡಲು ಜ.15 ರಿಂದ ಆನ್ ಮತ್ತು ಆಫ್ ಮಾದರಿಯಲ್ಲಿ ಮೇ ತಿಂಗಳವರೆಗೆ ನೀಡುವುದು ಉತ್ತಮ. ಹಾಗೂ ತುಂಗಾ ನದಿಯಿಂದ ಅಪ್ಪರ್ ಭದ್ರಾ ಯೋಜನೆಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು. ಇಂಜಿನಿಯರುಗಳು ಸಭೆ ಕೈಗೊಂಡು ತುಂಗಾ ಜಲಾಶಯದಿಂದ ನೀರೆತ್ತಲು ಕ್ರಮ ವಹಿಸಬೇಕೆಂದರು.
ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಕಟ್ಟಕಡೆಯ ಅಚ್ಚುಕಟ್ಟುದಾರರವರೆಗೆ ನೀರು ನೀಡುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 31739 ಹೆಕ್ಟೇರ್ ತೋಟಗಾರಿಕೆ ಬೆಳೆಯಿದ್ದು, ಇದನ್ನು ಉಳಿಸಿಕೊಳ್ಳಬೇಕಾಗಿದೆ. ಡಿಸ್ಚಾರ್ಜ್ ನೀರನ್ನು ನಿರ್ವಹಿಸಲು, ಅಕ್ರಮವಾಗಿ ನೀರೆತ್ತುವುದನ್ನು ನಿಲ್ಲಿಸಲು ವಾಹನ ನಿಯೋಜಿಸಬೇಕು, ಸೋಡಿಗಳನ್ನು ಮತ್ತು ಕಾನ್ಸ್ಟೇಬಲ್ನ್ನು ನೇಮಿಸಬೇಕೆಂದರು.
ಮತ್ತು ತುಂಗಾ ಜಲಾಶಯದಿಂದ 19.5 ನೀರನ್ನು ಲಿಫ್ಟ್ ಮಾಡಿದಲ್ಲಿ ಭದ್ರಾ ಜಲಾಶಯಕ್ಕೆ ನೀರು ಉಳಿಯುತ್ತದೆ. ಆದ್ದರಿಂದ ಸಚಿವರು, ಶಾಸಕರು ಸೇರಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಬಳಿ ಈ ಬಗ್ಗೆ ಮಾತನಾಡಿ ತುಂಗಾ ನದಿಯಿಂದ ಮೇಲ್ದಂಡ ಯೋಜನೆಗೆ ನೀರು ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ನೀರನ್ನು ಆನ್ ಮತ್ತು ಆಫ್ ಜೊತೆಗೆ ಡಿಸ್ಚಾರ್ಜ್ ನಿರ್ವಹಣೆ ಮಾಡಬೇಕು. ಹಾಗೂ ನೀರಿನ ಸಂಗ್ರಹಕ್ಕಿಂತ ಮುಖ್ಯವಾಗಿ ನಿರ್ವಹನೆ ಕಡೆ ಹೆಚ್ಚಿನ ಒತ್ತು ನೀಡಬೇಕೆಂದರು,
ದಾವಣಗೆರೆ ಭಾಗದ ರೈತ ಮುಖಂಡರಾದ ಲಿಂಗರಾಜ್ ಮಾತನಾಡಿ, ಅಕ್ರಮ ಪಂಪ್ಸೆಟ್ನಿಂದ ನೀರೆತ್ತುವವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡು ಬಿಗಿ ಮಾಡಿದಲ್ಲಿ ಎಲ್ಲ ರೈತರಿಗೆ ಅನುಕೂಲವಾಗುವುದು ಎಂದರು.
ರೈತ ಮುಖಂಡರಾದ ರಘು ಮಾತನಾಡಿ, ನೀರು ನಿಲ್ಲಿಸಿ 90 ದಿನಗಳಾಗಿದ್ದು ಬೆಳೆ ಉಳಿಸಿಕೊಳ್ಳಲು ತಕ್ಷಣದಿಂದ ನೀರನ್ನು ಬಿಡಬೇಕು ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಲತಾ ಮಲ್ಲಿಕಾರ್ಜುನ್, ಬಿ.ಕೆ.ಸಂಗಮೇಶ್, ಡಿ.ಜೆ. ಶಾಂತನಗೌಡ, ಬಸವರಾಜಪ್ಪ, ಶ್ರೀನಿವಾಸ್, ಬಸವರಾಜು ಶಿವಗಂಗ, ಕಾಡಾ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಆಡಳಿತಾಧಿಕಾರಿ ಮುರಳೀಧರ್, ಅಭಿಯಂತರರು, ಅಧಿಕಾರಿಗಳು, ರೈತ ಮುಖಂಡರು ಹಾಜರಿದ್ದರು.