ಶಿವಮೊಗ್ಗ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್ ಡಿಸೆಂಬರ್ 19ರಂದು ಆಯೋಜಿಸಲಾಗಿದ್ದು, 7966 ಪ್ರಕರಣಗಳನ್ನು ಲೋಕ ಅದಾಲತ್‍ಗಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು ತಿಳಿಸಿದರು.

ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಬೃಹತ್ ಲೋಕ ಅದಾಲತ್ ಆಯೋಜನೆ ಕುರಿತು ಮಾಹಿತಿ ನೀಡಿ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‍ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಹಾಗೂ ಇತರ ಪ್ರಕರಣಗಳನ್ನು ಗುರುತಿಸಲಾಗಿದೆ. ಸದರಿ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿ ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಲೋಕ ಅದಾಲತ್‍ನಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ, ಜಲಮಂಡಳಿ ಇನ್ನಿತರ ನ್ಯಾಯಾಲಯಕ್ಕೆ ಬರಬಹುದಾದ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ. ಈ ಪ್ರಕರಣಗಳಲ್ಲಿ ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ತೀರ್ಪು ನೀಡಲಾಗುವುದು. ಅಂತಹ ತೀರ್ಪುಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ, ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಹಾಗೂ ಸಮಯ ಉಳಿತಾಯವಾಗುತ್ತದೆ. ಶೀಘ್ರವಾಗಿ ನ್ಯಾಯ ಪಡೆಯಲು ಸಹ ಇದರಿಂದ ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 51800 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ ರಾಜಿಯಾಗಬಹುದಾದ 27030 ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 7966ಪ್ರಕರಣಗಳನ್ನು ಬೃಹತ್ ಲೋಕ ಅದಾಲತ್‍ನಲ್ಲಿ ಎತ್ತಿಕೊಳ್ಳಲು ನಿರ್ಧರಿಸಲಾಗಿದೆ. ಲೋಕ ಅದಾಲತ್ ಇಡೀ ದಿನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥ ನಿರೀಕ್ಷಿಸಲಾಗಿದೆ. ಜಿಲ್ಲಾ ನ್ಯಾಯಾಲಯದಲ್ಲಿ 12ರಿಂದ 16ಬೆಂಚುಗಳು ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 3-4ಬೆಂಚುಗಳಲ್ಲಿ ಪ್ರಕರಣಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಸೆಪ್ಟಂಬರ್ 19ರಂದು ನಡೆಸಲಾಗಿದ್ದ ಲೋಕ ಅದಾಲತ್‍ನಲ್ಲಿ 3207 ಪ್ರಕರಣಗಳನ್ನು ಗುರುತಿಸಲಾಗಿತ್ತು. ಅವುಗಳ ಪೈಕಿ 1057 ವಿಲೇವಾರಿ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸಂತ್ರಸ್ತ ಪರಿಹಾರ ಯೋಜನೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆಯಡಿ ಮತ್ತೊಬ್ಬರ ಅಪರಾಧಿಕ ಕೃತ್ಯಗಳಿಂದ ಯಾವುದೇ ರೀತಿಯಲ್ಲಿ ಗಾಯಗೊಂಡ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಇದುವರೆಗೆ ದಾಖಲಾದ 288 ಪ್ರಕರಣಗಳ ಪೈಕಿ 283 ಪ್ರಕರಣಗಳನ್ನು ಇತ್ಯರ್ಥಪಡಿಸಿ, 168ಪ್ರಕರಣಗಳಲ್ಲಿ 4.19ಕೋಟಿ ರೂ. ಪರಿಹಾರವನ್ನು ನೊಂದ ವ್ಯಕ್ತಿಗಳಿಗೆ ನೀಡಲಾಗಿದೆ. ಅಪರಾಧಿಕ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳು ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ,ಜಯಂತ್ ಕುಮಾರ್, ಬಾರ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಎನ್.ರಾಜಾರಾಂ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!