ಶಿವಮೊಗ್ಗ: ಇತ್ತೀಚೆಗೆ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಪ್ರಕಟಿಸಿದಂತೆ ಕೋವಿಡ್ ಜೆಎನ್ 1 ರೂಪಾಂತರ ತಳಿ ಆತಂಕಕಾರಿಯಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕೋವಿಡ್ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ನಿಯಂತ್ರಣ ಕುರಿತು ಆರೋಗ್ಯ ಇಲಾಖೆ ಎಲ್ಲ ಸಿದ್ಧತೆ ನಡೆಸಿದ್ದು, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಜನ್ ಬೆಡ್, 100 ಐಸಿಯು ಬೆಡ್ ಮತ್ತು 85 ವೆಂಟಿಲೇಟರ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ 30 ಐಸಿಯು ಬೆಡ್ ಹಾಗೂ 6 ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ಭಯಪಡದೇ ಜ್ವರ, ಶೀತ, ಕೆಮ್ಮು ಗುಣಲಕ್ಷಣ ಕಂಡುಬಂದಲ್ಲಿ ಸರ್ಕಾರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕು. ಉತ್ತಮ ಜೀವನಶೈಲಿ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದು ಗುಣಪಡಿಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಡಾ. ಗುಡದಪ್ಪ ಕಸಬಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ವಸಂತ ಹೋಬಳಿದಾರ್, ಡಾ. ಪರಮೇಶ್ವರ ಶಿಗ್ಗಾವ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಶ್ರೀಕಾಂತ್, ಮಹೇಶ್, ಡಾ. ಅರುಣ್, ಎಂ.ಪಿ.ನಾಗರಾಜ್, ಡಾ. ಅವಿನಾಶ್, ಎಸ್.ಸಿ.ರಾಮಚಂದ್ರ, ಅರುಣ್ ದಿಕ್ಷೀತ್, ಮಂಜುನಾಥ ಕದಂ, ಮುಕುಂದಗೌಡ, ಕೃಷ್ಣಮೂರ್ತಿ, ಉಮಾ ಮತ್ತಿತರರು ಉಪಸ್ಥಿತರಿದ್ದರು.