ಪ್ರವಾಸಿತಾಣವಾಗಲಿರುವ ರಾಗಿಗುಡ್ಡ : ಅಭಿವೃದ್ಧಿಗೆ ತಜ್ಞರ ತಂಡ
ಶಿವಮೊಗ್ಗ: ನಗರಕ್ಕೆ ಹತ್ತಿರವಾಗಿರುವ ರಾಗಿಗುಡ್ಡವನ್ನು ಪ್ರವಾಸಿತಾಣವನ್ನಾಗಿಸಲು ಸರ್ಕಾರ ಮುಂದಾಗಿದ್ದು, ರಾಗಿಗುಡ್ಡದ ಸುತ್ತಲೂ ಜೈವಿಕ ವನದ ನಿರ್ಮಾಣ ಹಾಗೂ ತುಂಗಾ ಮೇಲ್ದಂಡೆಯ ಯೋಜನೆಯ ಕಾಲುವೆಯ ಎರಡೂ ಭಾಗಗಳಲ್ಲಿ ಸುಮಾರು ೧೦ ಕಿ.ಮೀ. ವಿಸ್ತೀರ್ಣದಲ್ಲಿ ಗಿಡಗಳನ್ನು ನೆಡುವುದು, ಫಿನಿಸಿಂಗ್ ಹಾಗೂ ವಾಕಿಂಗ್ ಪಾಥ್ ಮತ್ತು ಸೈಕಲ್ ಪಾಥ್ ನಿರ್ಮಾಣ , ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳು, ಕಾಲುವೆಗೆ ಹ್ಯಾಂಗಿಂಗ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಹಾಗೂ ಪರಿಸರಾಸಕ್ತ ತಂಡ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇಂದು ರಾಗಿಗುಡ್ಡ ಹಾಗೂ ತುಂಗಾ ಮೇಲ್ದಂಡೆಯ ಕಾಲುವೆಯ ಸ್ಥಳ ಪರಿಶೀಲನೆಗೆ ತಜ್ಞರ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ದ್ರೋಣ್ ಮೂಲಕ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಅಂಶಗಳನ್ನು ಗುರುತಿಸಿತು.
ಈ ಸಂದರ್ಭದಲ್ಲಿ ನಗರದ ಉತ್ತಿಷ್ಠ ಭಾರತ ಮಲೆನಾಡು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿ ಮತ್ತು ಪರಿಸರ ಆಸಕ್ತ ತಂಡಗಳು ತಜ್ಞರಿಗೆ ಸಾಥ್ ನೀಡಿದವು. ಮೊದಲ ಹಂತದಲ್ಲಿ ರಾಗಿಗುಡ್ಡದಲ್ಲಿ ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ಜೈವಿಕ ವನ ನಿರ್ಮಾಣ ಮತ್ತು ಗುಡ್ಡದ ಮೇಲೆ ಸೂರ್ಯಾಸ್ಥ ವೀಕ್ಷಣೆ, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಇದೊಂದು ಆಕ್ಸಿಜನ್ ವಲಯವಾಗಬೇಕೆನ್ನುವ ಪರಿಸರಾಸಕ್ತರ ಬೇಡಿಕೆಗೆ ರಾಜ್ಯ ಸರ್ಕಾರ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಆಸಕ್ತಿ ವಹಿಸಿದ್ದು, ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.
ತುಂಗಾ ಮೇಲ್ದಂಡೆ ಕಾಲುವೆಯ ಎರಡೂ ಭಾಗದಲ್ಲಿ ಕೂಡ ಸುಮಾರು ೭೦ ಸಾವಿರ ಗಿಡ ನೆಟ್ಟು, ಟ್ರೀಗಾರ್ಡ್ ಅಳವಡಿಸಿ ಅರಣ್ಯಾ ಇಲಾಖೆ ಮತ್ತು ಪರಿಸರಾಸಕ್ತರ ಜೊತೆಗೂಡಿ ನಿರ್ವಾಹಣೆ ಮಾಡಿ ಒಂದು ಅರಣ್ಯ ನಿರ್ಮಿಸುವ ಯೋಜನೆಯೂ ಇದ್ದು, ಇನ್ನು ಅನೇಕ ಪ್ರವಾಸೋಧ್ಯಮಕ್ಕೆ ಅನುಕೂಲವಾಗುವ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ೨ನೇ ಹಂತದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದು, ಇದಕ್ಕೆ ಅನುದಾನ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
ನೀರಾವರಿ ನಿಗಮದಿಂದ ೩ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿಯ ಸ್ಥಳ ವೀಕ್ಷಣೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ.ಕಾಂತೇಶ್, ಪರಿಸರ ತಜ್ಞರಾದ ಬಿ.ಎಂ. ಕುಮಾರಸ್ವಾಮಿ, ಪ್ರೊ. ಶ್ರೀಪತಿ, ಪ್ರೊ. ಚಂದ್ರುಶೇಖರ್, ಡಿ.ಎಫ್.ಓ ಶಂಕರ್, ನೀರಾವರಿ ನಿಗಮದ ಅಧಿಕಾರಿಗಳು, ಎಡಬ್ಲ್ಯೂಇ ಪ್ರವೀಣ್, ನವ್ಯಶ್ರೀ ನಾಗೇಶ್, ಪ್ರಕಾಶ್, ಬಾಲಕೃಷ್ಣ ನಾಯ್ಡು, ಹಾಗೂ ಉತ್ತಿಷ್ಠ ಭಾರತ ಮಲೆನಾಡು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿಯ ಸದಸ್ಯರು ಪರಿಸರಾಸಕ್ತರು ಉಪಸ್ಥಿತರಿದ್ದರು.
ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಹಾರೈಕೆಗೆ ವಿಶೇಷ ವಿಭಾಗ ಆರಂಭ
ಶಿವಮೊಗ್ಗ: ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಆರೈಕೆಗೆ ಅತ್ಯಾಧುನಿಕ ವಿಶೇಷ ವಿಭಾಗ ಸ್ಥಾಪಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಸಲಹಾ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ರವಿವರ್ಮ ಪಾಟೀಲ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹುತೇಕ ಮಕ್ಕಳ ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದಾಗಿದ್ದರೂ ಗುಣಮಟ್ಟದ ಚಿಕಿತ್ಸೆ ಮತ್ತು ಸಕಾಲಿಕ ವೈದ್ಯಕೀಯ ಸಲಹೆ ಸಿಗದೇ ಸಾವಿಗೀಡಾಗುತ್ತಿದ್ದಾರೆ. ಈ ವಿಭಾಗದ ಮೂಲಕ ಇಂತಹ ಪ್ರಕರಣಗಳನ್ನು ಕಡಿಮೆಗೊಳಿಸಬಹುದಾಗಿದೆ ಎಂದರು.
ಮಲೆನಾಡು ಮತ್ತು ಸುತ್ತಮುತ್ತಲಿನ ಪ್ರದೇಶದ ಹೃದ್ರೋಗ ಮಕ್ಕಳಿಗೆ ಉತ್ತಮ ಗುಣಮಟ್ಟದ ಆರೈಕೆ ಲಭ್ಯವಾಗುವಂತೆ ಈ ವಿಭಾಗ ಸ್ಥಾಪಿಸಲಾಗಿದೆ. ಮಕ್ಕಳ ಹೃದಯ ಆರೈಕೆಯು ತೀರಾ ವಿಶೇಷ ಪರಿಣತಿಯ ಕ್ಷೇತ್ರವಾಗಿದ್ದು, ಇಂದಿನ ಅಗತ್ಯವೂ ಆಗಿದೆ. ೨೦ ಹಾಸಿಗೆಗಳ ಸೌಲಭ್ಯವಿರುವ ಈ ವಿಭಾಗವು ಹೃದ್ರೋಗ ಹೊಂದಿದ ಮಕ್ಕಳಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳಾದ ಆಪರೇಷನ್ ಥಿಯೇಟರ್, ಕ್ಯಾಥ್ ಲ್ಯಾಬ್ ಮತ್ತು ಐಸಿಯು ಸೌಲಭ್ಯ ಹೊಂದಿದೆ ಎಂದರು.
ಈ ವಿಭಾಗದ ಉದ್ಘಾಟನೆಯು ಅ.೧೦ ರಂದು ನಡೆದಿದ್ದು, ಈಗಾಗಲೇ ಎರಡು ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ೧೩ ವರ್ಷದ ಅಭಿಷೇಕ್ ಹಾಗೂ ೯ ತಿಂಗಳ ಮಾನಸ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ಹೃದಯ ಸಮಸ್ಯೆಯಿಂದ ಗುಣಮುಖರಾಗಿದ್ದಾರೆ ಎಂದರು.
ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಇನ್ನಿತರ ಕಾರ್ಡ್‌ಗಳನ್ನು ಹೊಂದಿದ್ದರೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಕಾರ್ಡ್ ಹೊಂದಿಲ್ಲದವರಿಗೆ ಪ್ಯಾಕೇಜ್ ರೀತಿಯಲ್ಲಿ ಶುಲ್ಕವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಪವನ್ ಕುಮಾರ್, ಪಿಆರ್‌ಓ ರಾಜಾಸಿಂಗ್ ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು ಹಾಗೂ ಅವರ ಪೋಷಕರು ಉಪಸ್ಥಿತರಿದ್ದರು.
ಸೇವೆಗೆ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಿ
ಶಿವಮೊಗ್ಗ: ಕೋವಿಡ್ ಮಾರ್ಗಸೂಚಿಯಂತೆ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಬಳಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಸಮನ್ವಯ ಸಮಿತಿ ಆಗ್ರಹಿಸಿದೆ.
ಕಾಲೇಜು ಶಿಕ್ಷಣ ಇಲಾಖೆ ಕಳೆದ ೮ ತಿಂಗಳ ನಂತರ ಕೋವಿಡ್ ಮಾರ್ಗಸೂಚಿಯನ್ವಯ ೪೦-೫೦ರ ವಿದ್ಯಾರ್ಥಿಗಳ ಅನುಪಾತದಲ್ಲಿ ತರಗತಿ ಆರಂಭಿಸುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೆ ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಾಗಿರುವುದರಿಂದ ೨೦೨೦-೨೧ನೇ ಸಾಲಿಗೆ ಸೇವೆಯಲ್ಲಿ ಮುಂದುವರೆಸುವಂತೆ ಆದೇಶ ನೀಡಿದ್ದರು. ಆದರೆ ಇದುವರೆಗೂ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಬಳಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ವಿಳಂಬ ಧೋರಣೆ ಅನುಸರಿಸುವ ಮೂಲಕ ಅತಿಥಿ ಉಪನ್ಯಾಸಕರನ್ನು ಹಾಗೂ ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ.ಸೋಮಶೇಖರ್ ಶಿಮೊಗ್ಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಕಾಲೇಜು ಶಿಕ್ಷಣ ಇಲಾಖೆಯ ಈ ನಡೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬಲವಾದ ಕೊಡಲಿಪೆಟ್ಟು ಬಿದ್ದಿದೆ. ಕಾರಣ ಸರ್ಕಾರಿ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ, ರೈತಾಪಿ, ಬಡ, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಪಾಠವು ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬ ಗಂಭೀರ ದೂರುಗಳಿವೆ. ಇದರ ಜೊತೆಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ನಿಧಾನವಾಗಿ ಕಡಿತಗೊಳಿಸಿ ನೂರಾರು ಕೋಟಿ ವೇತನ ಸರ್ಕಾರದ ಬೊಕ್ಕಸಕ್ಕೆ ಉಳಿಸಿಕೊಡುವ ಹುನ್ನಾರ ಇದಾಗಿದೆ ಎಂದರು.
ಶಿಕ್ಷಕ,ಪದವೀಧರರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನಪರಿಷತ್ ಸzಸ್ಯರುಗಳು ಯಾರೂ ಕೂಡ ಚಕಾರ ಎತ್ತದೇ ಇರುವುದು ಅತಿಥಿ ಉಪನ್ಯಾಸಕರ ಉದ್ಯೋಗ ಸಂರಕ್ಷಿಸುವ ದೃಷ್ಟಿಯಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕನಿಷ್ಟ ಕಾಳಜಿ ಇರದ ಅವರ ಆಷಾಢಭೂತಿತನ ವ್ಯಕ್ತಮಾಡಿದಂತಿದೆ. ಸ್ವತಃ ಸರ್ಕಾರವೇ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾಪಾಡಲು ಆದೇಶ ಮಾಡಿದ್ದರೂ ಅದನ್ನು ಪಾಲಿಸದಷ್ಟೂ ಇಲಾಖೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ ಎಂದು ದೂರಿದರು.
ಅಭಿನಂದನೆಗಳು: ಅತಿಥಿ ಉಪನ್ಯಾಸಕರ ಲಾಕ್‌ಡೌನ್ ಅವಧಿಯ ೫ ತಿಂಗಳ ವೇತನವನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಮೊದಲ ಹಂತದ ೪೨ ಕೋಟಿ ರೂ. ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಿಗೆ, ವೇತನ ಬಿಡುಗಡೆಗಾಗಿ ರಾಜ್ಯಾದ್ಯಂತ ನಿರಂತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಎಲ್ಲ ಜನಪರ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ಎಂ.ಸಿ.ನರಹರಿ, ಖಜಾಂಚಿ ಕೆ.ರಾಜೇಶ್ ಕುಮಾರ್ ಉಪಸ್ಥಿತರಿದ್ದರು.
ಪದವೀಧರ ಸಹಕಾರ ಸಂಘದ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಟ್ ವಿತರಣೆ
ಶಿವಮೊಗ್ಗ: ಪದವೀಧರರ ಸಹಕಾರ ಸಂಘದ ಸದಸ್ಯರಿಗೆ ಶೇ.೧೩ ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ೨೦೨೧ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂಘದ ೫೦ನೇ ವರ್ಷವು ಕಳೆದ ಸೆ.೨೧ರಿಂದ ಆರಂಭವಾಗಿದ್ದು, ವರ್ಷವಿಡೀ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
೫೦ನೇ ವರ್ಷದ ಸಂಭ್ರಮಾಚರಣೆಯ ಸವಿನೆನಪಿಗಾಗಿ ಕೃಷಿ ನಗರದಲ್ಲಿ ಒಂದು ನಿವೇಶನವನ್ನು ಕೊಂಡು ಕಟ್ಟಡ ನಿರ್ಮಿಸಿ ಹೊಸ ಶಾಖೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅಂಗವಿಕಲ, ವಿಧವೆ ಮತ್ತು ಮಾಜಿ ಸೈನಿಕ ಸದಸ್ಯರುಗಳಿಗೆ ನಿಗದಿ ಠೇವಣಿ ಮೇಲೆ ಶೇ.೦.೫೦ ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುವುದು ಹಾಗೂ ಸದಸ್ಯರು ನಿವೇಶನ ಕೊಳ್ಳಲು ಶೇ.೮.೫೦ ಬಡ್ಡಿದರದಲ್ಲಿ ಸುಮಾರು ೭೫ ಲಕ್ಷದವರೆಗೂ ಸಾಲ ನೀಡಲಾಗುವುದು ಎಂದರು.
೬೨೭೩ ಸದಸ್ಯರನ್ನು ಹೊಂದಿರುವ ಸಂಘವು ೨.೮೩ ಕೋಟಿ ರೂ.ಷೇರು ಬಂಡವಾಳ ಹೊಂದಿದೆ. ಸಂಘದ ಒಟ್ಟು ವಹಿವಾಟು ಮಾರ್ಚ್ ಅಂತ್ಯಕ್ಕೆ ೧೩೧ ಕೋಟಿ ಆಗಿದ್ದು, ೫.೧೨ ಕೋಟಿ ರೂ. ಆದಾಯ ಹೊಂದಿ ೧.೧೧ ಕೋಟಿ ರೂ.ನಿವ್ವಳ ಲಾಭ ಗಳಿಸಿದೆ. ೪೪.೩೬ ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ೩೮.೮೨ ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಪದವೀಧರರ ಸಹಕಾರ ಸಂಘದ ಸರ್ವಸದಸ್ಯರ ಸಭೆ ನಾಳೆ ಸವಳಂಗ ರಸ್ತೆಯಲ್ಲಿ ಸರ್ಜಿ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಗರದ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೆಶಕರುಗಳಾದ ಜೋಗದ ವೀರಪ್ಪ, ಹೆಚ್.ಸಿ.ಸುರೇಶ್, ಎಸ್.ಕೆ.ಕೃಷ್ಣಮೂರ್ತಿ, ಎಸ್.ರಾಜಶೇಖರ್, ಡಾ.ಯು.ಚಂದ್ರಶೇಖರ್, ಯು.ರಮ್ಯ, ಕವಿತಾ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಸ್ವಾಸ್ಥ್ಯ ಕಾಪಾಡಲು ಕ್ರೀಡಾ ಚಟುವಟಿಕೆ ಅಗತ್ಯ: ಆರ್.ಪ್ರಸನ್ನಕುಮಾರ್
ಶಿವಮೊಗ್ಗ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮತ್ತು ಸ್ವಾಸ್ಥ್ಯ ಕಾಪಾಡಲು ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಆರ್. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪೆಸಿಟ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಿರಂತರ ಒತ್ತಡದಲ್ಲಿ ಕೆಲಸ ಮಾಡುವ ಪಾಲಿಕೆ ಸಿಬ್ಬಂದಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅಲ್ಲದೆ ತಮ್ಮ ಮನೆಯವರನ್ನು ಕರೆದುಕೊಂಡು ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮನೆಯವರಿಗೆ ಮನರಂಜನೆಯ ಜೊತೆಗೆ ಮನೆಯ ವಾತಾವರಣವೂ ಚೆನ್ನಾಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮನಸ್ಸು ಉಲ್ಲಾಸವಾಗಿರುತ್ತದೆ. ಪಾಲಿಕೆ ಸಿಬ್ಬಂದಿಗಳ ಆರೋಗ್ಯ ಚೆನ್ನಗಿದ್ದರೆ ಪಾಲಿಕೆಯ ಆರೋಗ್ಯವೂ ಚೆನ್ನಾಗಿರುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದರು.
ಮೇಯರ್ ಸುವರ್ಣ ಶಂಕರ್ ಮಾತನಾಡಿ, ಇಂದುಮತ್ತು ನಾಳೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಪ್ರಮುಖವಾಗಿ ಪಾಲಿಕೆ ಸದಸ್ಯರೂ ಸೇರಿದಂತೆ ೧೨ ತಂಡಗಳು ಕ್ರಿಕೆಟ್ ಆಡಲಿದೆ. ಮಹಿಳಾ ಸಿಬ್ಬಂದಿಗಳು ಮತ್ತು ಮಹಿಳಾ ಕಾರ್ಪೋರೇಟರ್‌ಗಳಿಗೆ ಬೇರೆ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವನ್ನು ಕಾಪಾಡಲು ಸಲಹೆ ನೀಡಿದರು.
ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್ ಮಾತನಾಡಿ, ಕರೋನ ಸಂಕಷ್ಟದಲ್ಲಿ ಪಾಲಿಕೆಯ ಸಿಬ್ಬಂದಿಗಳು ತಮ್ಮ ಹಕ್ಕಿನ ರಜಾ ದಿನವನ್ನು ತ್ಯಾಗ ಮಾಡಿ ನಗರದ ಜನತೆಯ ಸ್ವಾಸ್ಥ್ಯವನ್ನು ಕಾಪಾಡಿದ್ದಾರೆ. ಅಧಿಕಾರಿಗಳು, ಸಿಬ್ಬಂದಿಗಳು ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಒಂದೇ ಕುಟುಂಬದ ಸದಸ್ಯರಂತೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಈ ಕ್ರಿಕೆಟ್ ಕ್ರೀಡಾಕೂಟಕ್ಕೆ ಮೇಯರ್ ಕಪ್ ಎಂದು ಹೆಸರಿಡುವ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಯುಕ್ತ ಚಿದಾನಂದ್ ವಠಾರೆ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಎನ್. ಗೋವಿಂದ, ಪಾಲಿಕೆಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಶಿವಮೊಗ್ಗ: ನಿನ್ನೆ ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಸುಮುಖ ಕಲಾ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಕೇಂದ್ರದ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಮತ್ತು ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಕೃಷ್ಣ ಮರಕಾಲ ಹಳ್ಳಾಡಿ ಇವರಿಗೆ ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ಗೆ 16.29 ಕೋಟಿ ನಿವ್ವಳ ಲಾಭ
ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೧೬.೨೯ ಕೋಟಿ.ರೂ. ನಿವ್ವಳ ಲಾಭಗಳಿಸಿದ್ದು, ಮಾರ್ಚ್ ೨೧ರ ಅಂತ್ಯಕ್ಕೆ ೨೦ ಕೋಟಿ ರೂ.ಲಾಭಗಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರು ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೧೯-೨೦ನೇ ಸಾಲಿನಲ್ಲಿ ಬ್ಯಾಂಕ್ ೧೧೨.೨೫ ಕೋಟಿ ರೂಗಳ ಷೇರು ಬಂಡವಾಳ, ೯೬೧.೦೬ ಕೋಟಿ ರೂ ಠೇವಣಿ ಹೊಂದಿದ್ದು ಬ್ಯಾಂಕ್‌ನ ಇತಿಹಾಸದಲ್ಲೆ ದಾಖಲಾರ್ಹವಾಗಿದೆ. ೧೪೩೩.೩೫ ಕೋ. ರೂ.ಗಳ ದುಡಿಯವ ಬಂಡವಾಳ ಹೊಂದಿದೆ. ಬ್ಯಾಂಕ್ ಆರ್ಥಿಕ ಸದೃಢತೆ ಹೊಂದಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ೧೦೮೬೭೦ ರೈತರಿಗೆ ೬೯೪.೪೭ ಕೋ.ರೂಗಳ ಅಲ್ಪಾವಧಿ ಸಾಲ ನೀಡಿದ್ದು, ೩೧೮೩೨ ರೈತರಿಗೆ ೧೫೪.೫೯ ಕೋ.ರೂಗಳ ಹೆಚ್ಚುವರಿ ಸಾಲ ನೀಡಲಾಗಿದೆ. ಕೃಷಿ ಅಭಿವೃದ್ದಿಗಾಗಿ ೩೪.೨೪ ಕೋ.ರೂ ಸಾಲ ನೀಡಲಾಗಿದೆ. ಕೃಷಿ ಸಾಲ ವಸೂಲಾತಿಯಲ್ಲಿ ಶೇ. ೯೩.ರಷ್ಟು, ಕೃಷಿಯೇತರ ಸಾಲ ವಸೂಲಾತಿಯಲ್ಲಿ ಶೇ.೬೮ರಷ್ಟು ಸಾಧನೆ ಮಾಡಲಾಗಿದ್ದು, ರಿಸರ್ವ್ ಬ್ಯಾಂಕ್ ಮಾನದಂಡದಂತೆ ಶೇ.೯ ಕ್ಕಿಂತ ಹೆಚ್ಚು ಅಂದರೆ ಶೇ. ೧೧.೫೭ ರಷ್ಟು ಸಿಆರ್‌ಎಆರ್ ಹೊಂದಿದೆ ಎಂದರು.
ಮುಂದಿನ ದಿನಗಳಲ್ಲಿ ಹೊಸಶಾಖೆಗಳು, ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಯೋಜನೆಗಳನ್ನು ನಿಯಮಬದ್ದವಾಗಿ ಅನುಷ್ಟಾನಗೊಳಿಸಲು ತೀರ್ಮಾನಿಸಲಾಗಿದೆ. ಜನವರಿ ೩೧, ೨೦೨೦ ರ ಅಂತ್ಯಕ್ಕೆ ಜಿಲ್ಲೆಯಲ್ಲಿ ೨೬೨ ರೈತರು ೫೬೧.೮೭ ಕೋ.ರೂ ಬಡ್ಡಿ ಮನ್ನಾ ಪ್ರಯೋಜನವನ್ನು ಪಡೆದಿದ್ದಾರೆ. ರೈತರಿಗೆ ನಾಲ್ಕು ಚಕ್ರದ ವಾಹನಗಳ ಖರೀದಿಗೆ ಶೇ.೯ ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ವಿತರಣೆಯಲ್ಲಿ ತೀರ್ಥಹಳ್ಳಿ ತಾಲ್ಲೂಕನ್ನು ಕಡೆಗಣಿಸಿದೆ ಎಂಬ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಅವರು, ಬ್ಯಾಂಕ್‌ನಲ್ಲಿ ಹೆಚ್ಚುವರಿ ಸಾಲ ನೀಡಿಕೆಯಲ್ಲಿ ಯಾವುದೇ ತಾರತಮ್ಯವನ್ನು ಮಾಡಿಲ್ಲ. ಎಲ್ಲಾ ತಾಲ್ಲೂಕುಗಳ ರೈತರಿಗೂ ಸಹಕಾರ ಸಂಘಗಳ ಮೂಲಕ ಸಾಲವನ್ನು ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ಎಸ್.ಪಿ.ದಿನೇಶ್, ಹೆಚ್.ಎಲ್.ಷಡಾಕ್ಷರಿ, ಬಿ.ಡಿ ಭೂಕಾಂತ, ವ್ಯವಸ್ಥಾಪಕ ನಿರ್ದೇಶಕರಾದ ರಾಜಣ್ಣ ರೆಡ್ಡಿ ಉಪಸ್ಥಿತರಿದ್ದರು.
ಬಿಜೆಪಿಯ ಮಾನವ ವಿರೋಧಿ ಮಸೂದೆಗಳನ್ನು ಜನರಿಗೆ ವಿವರಿಸಿ: ಶಿವಮೂರ್ತಿ ನಾಯ್ಕ
ಶಿವಮೊಗ್ಗ: ಗೋ ಹತ್ಯೆ, ಲವ್ ಜಿಹಾದ್, ಭೂ ಸುಧಾರಣೆ ಮುಂತಾದ ಮಾನವ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿರುವ ಮನುವಾದಿ ಬಿಜೆಪಿಯ ನಿರ್ಧಾರಗಳನ್ನು ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಜನರಿಗೆ ವಿವರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಲಾಗುವುದು ಎಂದು ಮಾಜಿ ಸಚಿವ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಭಾಗದ ಚುನಾವಣಾ ವೀಕ್ಷಕ ಶಿವಮೂರ್ತಿ ನಾಯ್ಕ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಂಡಿಸಿರುವುದು ಆತುರದ ನಿರ್ಧಾರವಾಗಿದೆ. ಪ್ರಜಾಪ್ರಭುತ್ವದ ನಿರ್ಧಾರವಾಗಿದೆ. ಆಹಾರದ ಬಗ್ಗೆಯೇ ಒಂದು ಮಸೂದೆ ಬರುತ್ತದೆ ಎಂದರೆ ಇದು ನಾಚಿಕೆಗೇಡಿನ ವಿಷಯ. ಅವರವರಿಗೆ ಇಷ್ಟವಾದ ಆಹಾರವನ್ನು ಅವರು ಸೇವಿಸುತ್ತಾರೆ. ಇಲ್ಲಿ ಗೋವು ಮಾತ್ರ ಇಲ್ಲ. ಕುರಿ, ಕೋಳಿ, ಮೇಕೆ ಎಲ್ಲವೂ ಇವೆ. ಇವುಗಳನ್ನೆಲ್ಲ ನಿಷೇಧ ಮಾಡಲು ಸಾಧ್ಯವೇ. ಆಹಾರ ಪದ್ದತಿಯ ಮೇಲೆ ನಿರ್ಬಂಧ ಹಾಕುವುದು ಸಂವಿಧಾನದ ಉಲ್ಲಂಘನೆ ಕೂಡ ಎಂದರು.
ಹಾಗೆಯೇ ಲವ್‌ಜಿಹಾದ್ ಕೂಡ, ಪ್ರೀತಿಗೆ ಇಡೀ ಜಗತ್ತೆ ಸೋಲುತ್ತದೆ. ಪರಸ್ಪರ ಒಪ್ಪಿಗೆಯಿಂದ ಯಾವ ಧರ್ಮ, ಜಾತಿಯವರು ಬೇಕಾದರು ಮದುವೆಯಾಗಬಹುದು. ಇದಕ್ಕೆ ಲವ್ ಜಿಹಾದ್ ಹೆಸರನ್ನು ಬಿಜೆಪಿಯವರು ಅದೇಕೆ ಕೊಡುತ್ತಾರೋ ಗೊತ್ತಿಲ್ಲ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಬಿಜೆಪಿ ನಾಯಕರು ಮತ್ತು ಅವರ ಮಕ್ಕಳು ಬೇರೆ ಜಾತಿಯವರನ್ನು ಮದುವೆ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಮಸೂದೆಗಳನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.
ಹೇಳಿಕೇಳಿ ಶಿವಮೊಗ್ಗ ಜಿಲ್ಲೆ ಹೋರಾಟದ ತವರೂರು. ಇಲ್ಲಿ ಕಾಗೋಡು ಅಂತಹ ಸತ್ಯಾಗ್ರಹ ನಡೆದಿದೆ. ಭೂಮಿಗಾಗಿ ಹೋರಾಟಗಳೇ ನಡೆದಿವೆ. ಇದೇ ನೆಲದಲ್ಲಿ ಬಂದ ಬಿ.ಎಸ್.ಯಡಿಯೂರಪ್ಪನವರು ಇಂದು ಭೂಸುಧಾರಣೆ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೆ ತರುವ ಮೂಲಕ ಇಡೀ ರೈತ ಸಮದಾಯವನ್ನೇ ನಾಶ ಮಾಡಲು ಹೊರಟಿದ್ದಾರೆ. ಇವರು ಜಾರಿಗೆ ತಂದಿರುವ ಇನ್ನಿತರ ಕಾಯಿದೆಗಳು ಕೂಡ ಜೀವವಿರೋಧಿಯಾಗಿವೆ. ಕೇವಲ ಧಾರ್ಮಿಕ ಭಾವನೆಗಳನ್ನು ಮುಗ್ದ ಜನರ ಮೇಲೆ ಏರಿ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವ ಇವರು ಇದೇ ಶಿವಮೊಗ್ಗದಲ್ಲಿಯೇ ಅದೆಷ್ಟು ಆಸ್ತಿ ಮಾಡಿದ್ದಾರೆ. ಅದೆಷ್ಟು ಜಮೀನು ಹೊಂದಿದ್ದಾರೆ ಎಂದು ಜನರಿಗೆ ಗೊತ್ತಿಲ್ಲದ ವಿಷಯವೇನಲ್ಲ ಎಂದರು.
ಕೇಂದ್ರ ಮತ್ತು ರಾಜ್ಯಸರ್ಕಾರದ ದೌರ್ಬಲ್ಯಗಳು, ಕೃಷಿ ನೀತಿ, ಧರ್ಮ ರಾಜಕಾರಣ ಇವೆಲ್ಲವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈ ಬಾರಿಯ ಗ್ರಾಮಾಂತರ ಚುನಾವಣೆಯನ್ನು ಎದರಿಸುತ್ತದೆ ಮತ್ತು ಅದರಲ್ಲಿ ಯಶಸ್ಸು ಆಗುತ್ತೇವೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಎಲ್ಲ ಮಸೂದೆಗಳನ್ನು ರದ್ದುಮಾಡಿಯೇ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ವಿಜಯಕುಮಾರ್, ವೇದಾವಿಜಯ್ ಕುಮಾರ್, ಶಿವಾನಂದ್, ನಾಗರಾಜ್, ಬಾಬು, ರಮೇಶ್ ಸೇರಿದಂತೆ ಹಲವರಿದ್ದರು.