ಶಿವಮೊಗ್ಗ,ಡಿ.೧೩: ಮುಳುಗಡೆ ಪ್ರದೇಶದ ರೈತರಿಗೆ ಸಂಸದ ಬಿ.ವೈ.ರಾಘವೇಂದ್ರ ದ್ರೋಹ ಬಗೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಶರಾವತಿ, ಸಾವೆಹಕ್ಲು ಸೇರಿದಂತೆ ಮುಳುಗಡೆ ರೈತರ ಸಮಸ್ಯೆ ಸಾಕಷ್ಟಿದೆ. ಸುಪ್ರೀಂಕೋರ್ಟ್ ತೀರ್ಪುಗಳು ಬಂದಿದೆ. ಆದರೆ, ಈ ಸಮಸ್ಯೆಗಳನ್ನು ಬಗೆಹರಿಸುವ ಒಂದು ಗಂಭೀರ ಪ್ರಯತ್ನವನ್ನು ಸಂಸದರಾಗಿ ಬಿ.ವೈ.ರಾಘವೇಂದ್ರ ಮಾಡಿಲ್ಲ ಎಂದರು.
ಒಕ್ಕೂಟದ ವ್ಯವಸ್ಥೆಯಲ್ಲಿ ಮುಳುಗಡೆಯಂತಹ ಸಮಸ್ಯೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರವೇ ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಸಂಸದರು ಮನವರಿಕೆ ಮಾಡಿಕೊಡಬೇಕು. ಶಿವಮೊಗ್ಗ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸದರು ಕೇಂದ್ರದ ಮೇಲೆ ಒತ್ತಡ ತರಲು ವಿಫಲರಾಗಿದ್ದಾರೆ.
ಮುಳುಗಡೆ ಸಂತ್ರಸ್ಥರ ಸಮಸ್ಯೆ, ಕಾಡಿನ ಒತ್ತುವರಿದ್ದಲ್ಲ. ಅರಣ್ಯನಾಶದ್ದು ಅಲ್ಲ, ನಾಡಿಗೆ ಬೆಳಕು ಕೊಟ್ಟವರು ಕತ್ತಲಲ್ಲಿರುವ ವ್ಯಥೆಯಾಗಿದೆ. ಆ ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸ ಮಾಡಿದೆ, ಆದರೆ ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಬಿ.ವೈ.ರಾಘವೇಂದ್ರರವರು ಚುನಾವಣೆಯ ಹಿನ್ನಲೆಯಲ್ಲಿ ಮುಳುಗಡೆ ಪ್ರದೇಶದ ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಸಂಸತ್‌ನಲ್ಲಿ ಒಂದು ಸ್ಟಾರ್ ಪ್ರಶ್ನೆ ಕೇಳಿದರು. ಅದಕ್ಕೆ ಕೇಂದ್ರ ಸರ್ಕಾರ ಸಚಿವರು ಕೊಟ್ಟ ಉತ್ತರ ಇದು ಸುಪ್ರೀಂ ಕೋಟ್‌ನಲ್ಲಿ ಇದೆ. ಆಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಈ ಉತ್ತರ ಕೇಳಿ ನಮ್ಮ ಸಂಸದರು ಏನು ಹೇಳದೆ, ಮಾತನಾಡದೆ, ತಲೆ ಅಲ್ಲಾಡಿಸಿ ಕುಳಿತುಕೊಂಡಿದ್ದಾರೆ. ಅವರ ಉತ್ತರ ಕೇಳಿ ಸುಮ್ಮನೆ ಕುಳಿತುಕೊಳ್ಳುವುದಕ್ಕ ಇವರು ಸಂಸದರಾಗಿರುವುದು. ಮುಳುಗಡೆ ಸಂತ್ರಸ್ಥರ ಕಷ್ಟವೇನು, ನಮಗೆ ನ್ಯಾಯ ಬೇಕು ಎಂದು ಚರ್ಚೆಯನ್ನು ಮುಂದುವರೆಸಲೇ ಇಲ್ಲ. ಇದು ರೈತರಿಗೆ ಮಾಡಿದ ಮೋಸವಲ್ಲದೇ ಮತ್ತೇನು ಅಲ್ಲ. ಮಾಹಿತಿಯನ್ನು ನೀಡಲಿಲ್ಲ, ಮನವರಿಕೆಯನ್ನು ಮಾಡಲಿಲ್ಲ ಎಂದರು.
ಸಂಸದರು ಇದುವರೆಗೂ ರಾಜ್ಯಸರ್ಕಾರದ ಜೊತೆ ಈ ಬಗ್ಗೆ ಮಾತನಾಡಿಲ್ಲ. ಸಮಾಲೋಚನೆ ಮಾಡಿಲ್ಲ, ವರದಿಯನ್ನೂ ತರಿಸಿಕೊಂಡಿಲ್ಲ, ಕೇವಲ ಮೋದಿ ಹೆಸರು ಹೇಳಿ ರೈತರನ್ನು ಮೋಸ ಮಾಡಲು ಆಗುವುದಿಲ್ಲ. ಸಂಸತ್ತಿನ ಅಧಿವೇಶನ ಇನ್ನೂ ನಡೆಯುತ್ತಿದೆ. ರೈತರ ಪರವಾಗಿ ಧ್ವನಿ ಎತ್ತಲಿ ಇಲ್ಲದಿದ್ದರೆ, ಮುಳುಗಡೆ ರೈತರು ಸಂಸದ ರಾಘವೇಂದ್ರ ವಿರುದ್ಧ ದಂಗೆ ಹೇಳುವ ಕಾಲ ದೂರವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಕೆಪಿಸಿಸಿ ಅಧ್ಯಕ್ಷ ವೈ.ಹೆಚ್.ನಾಗರಾಜ್, ಆಡಳಿತ ಉಸ್ತ್ತುವಾರಿ ಚಂದ್ರಭೂಪಾಲ್, ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಧರ್ಮರಾಜ್, ಶಿ.ಜು.ಪಾಶ ಇದ್ದರು.
ಅಡಕೆ ಮಾನ ತೆಗೆದರು, ಮೌನವಾಗಿರುವ ರಾಘವೇಂದ್ರ
ಕೇಂದ್ರ ಸರ್ಕಾರ ಪದೇ ಪದೇ ಅಡಕೆಯ ಮಾನ ತೆಗೆದರು ಕೂಡ ಯಾವುದೇ ಆಕ್ಷೇಪಣೆ ಮಾಡದೇ ಮೌನವಾಗಿದ್ದಾರೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಬಿ.ಎ.ರಮೇಶ್ ಹೆಗಡೆ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಅಡಕೆಗೆ ಗೌರವ ತರುತ್ತೇವೆ. ಬೆಳೆಗಾರರ ಹಿತರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದರು, ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಬಿಜೆಪಿಯ ಕೆಲ ಮುಖಂಡರು, ಸಚಿವರು ಪದೇ ಪದೇ ಅಡಕೆ ಕ್ಯಾನ್ಸ್‌ರ್ ಕಾರಕವೆಂದು ಲಿಖಿತ ಹೇಳಿಕೆ ನೀಡುತ್ತಿದ್ದಾರೆ. ಸಚಿವರಾದ ಅನುಪ್ರಿಯ ಪಟೇಲ್, ಅಶ್ವಿನ್‌ಕುಮಾರ್, ಸಂಸದ ನಿಶಿಕಾಂತ್ ದುಬೆ ಮುಂತಾದವರು ಅಡಕೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೂ ಕೂಡ ಕೇಂದ್ರ ಸರ್ಕಾರ ಸುಮ್ಮನೆ ಇದೆ. ಮತ್ತು ನಮ್ಮ ಸಂಸದ ಬಿ.ವೈ.ರಾಘವೇಂದ್ರ ಮೌನವಾಗಿದ್ದಾರೆ ಎಂದರು.