ಶಿವಮೊಗ್ಗ,ಡಿ.೧೧: ಶಿವಮೊಗ್ಗ ಜಿಲ್ಲಾ ಕೇಂದ್ರ ಗ್ರಹಕರ ಸೌಹಾರ್ದ ಸಹಕಾರಿ ನಿಯಮಿತದ(ಜನತ ಬಜಾರ್)ರಜತ ಮಹೋತ್ಸವ ಕಾರ್ಯಕ್ರಮ ಡಿ. ೧೬ರಂದು ಬೆಳಿಗ್ಗೆ ೧೧ಕ್ಕೆ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಜನತ ಬಜಾರ್‌ನ ಉಪಾಧ್ಯಕ್ಷ ಹಾಗೂ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಮಂಜಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೦ರ ದಶಕದಲ್ಲಿ ಒಂದು ವಿಶಿಷ್ಟ ರೀತಿಯ ಸಹಕಾರ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಆಗಿನ ಸಹಕಾರ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ಜನತಾ ಬಜಾರ್‌ನ್ನು ಆರಂಭಿಸಲು ನಿರ್ಧರ ಮಾಡಲಾಯಿತು. ಇದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸದಸ್ಯರಿಂದ ಶೇರು ಬಂಡವಾಳ ಸಂಗ್ರಹಿಸಿ ಸಹಕಾರ ಸಂಘವನ್ನು ಸ್ಥಾಪಿಸಲಾಯಿತು. ಈಗ ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ೯೪ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು, ೪೦೮ ವ್ಯಕ್ತಿ ಸದಸ್ಯರಿದ್ದಾರೆ. ೨.೬೦ ಲಕ್ಷ ಶೇರು ಬಂಡವಾಳ ಇದೆ ಎಂದರು.
ಸಂಘದ ಮುಖ್ಯ ಉದ್ದೇಶ ಗ್ರಹಕರಿಗೆ ದಿನಬಳಕೆ ವಸ್ತುಗಳನ್ನು ಜನತಾ ಬಜಾರ್ ಮೂಲಕ ಒದಗಿಸುವುದು ಆಗಿತ್ತು. ಆದರೆ ಗ್ರಾಹಕ ವಸ್ತುಗಳ ಅಂಗಡಿಯನ್ನು ಪ್ರಾರಂಭಿಸುವುದು ಕಷ್ಟವಾಗಿದ್ದರಿಂದ ಸದ್ಯಕ್ಕೆ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆಗಳಿಗೆ ಅವಶ್ಯಕವಾದ ಕಚೇರಿ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದೇವೆ. ಸದ್ಯಕ್ಕೆ ಜೆಪಿಎನ್ ರಸ್ತೆಯ ೨ನೇ ತಿರುವಿನಲ್ಲಿರುವ ಕಟ್ಟಡದಲ್ಲಿ ನಮ್ಮ ಕಾರ್ಯಲಯವಿದೆ ಎಂದರು.
ಸಂಸ್ಥೆ ಆರಂಭದಿಂದಲೂ ಲಾಭ ಗಳಿಸುತ್ತಲೇ ಇದೆ. ಶೇ. ೮ರಿಂದ ೨೫ರವರೆಗೆ ಲಾಭಂಶವನ್ನು ಕೊಡುದಿದ್ದೇವೆ. ಸದಸ್ಯರ ಸಂಖ್ಯೆ ಹೆಚ್ಚಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ಜನಸಮಾನ್ಯರಿಗೆ ಜನತಾಬಜಾರ್ ಹತ್ತಿರವಾಗಿಲ್ಲ ಎಂಬ ಕೊರಗು ಇದೆ. ಆದರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಯುಗದಲ್ಲೂ ಕೂಡ ಜನತಾ ಬಜಾರ್‌ನ್ನು ಯಶಸ್ವಿ ಗೊಳಿಸುತ್ತೇವೆ ಎಂದರು.
ಡಿ.೧೬ರಂದು ನಡೆಯುವ ರಜತಾ ಮಹೋತ್ಸವ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ, ಕರ್ನಾಟಕ ರಾಜ್ಯದ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತದ ಜಿ.ನಂಜೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಗ್ರಾಹಕರ ಸೌಹಾರ್ದ ಸಂಘದ ಅಧ್ಯಕ್ಷ ಕೆ.ಎಸ್. ವಿಠಲಶೆಟ್ಟಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಕೆ.ಆರ್. ಪ್ರಸನ್ನಕುಮಾರ್ ಸಂಸ್ಥಾಪಕರಿಗೆ ಮತ್ತು ಮಾಜಿ ನಿರ್ದೇಶಕರನ್ನು ಸನ್ಮಾನಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ನಾಗರಾಜ್ ಶೆಟ್ಟಿ, ಬಿ.ನಾಗರಾಜ, ಹೆಚ್.ಎನ್. ರವೀಶ್, ಕಾ.ರಾ.ನಾಗರಾಜ್, ಹೆಚ್.ಆರ್. ವೆಂಕಟೇಶ್ ಇದ್ದರು.