ಶಿವಮೊಗ್ಗ,ಡಿ.೧೧: ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ನ ಭ್ರಷ್ಟ ಸಂಸದನ ಮನೆಯಲ್ಲಿ ೩೦೦ ಕೋಟೆಗೂ ಹೆಚ್ಚಿನ ನಗದು ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಡಿ.ಸಿ. ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ದೀರರಾಜ್ ಸಾಹು ಅವರ ಮನೆಯಲ್ಲಿ ಕೋಟ್ಯಾಂತರ ನಗದು ಪತ್ತೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ, ಲೂಟಿಕೋರ,
ಲಂಚಕೋರ ಎಂಬುವುದು ಸಾಬೀತಾಗಿದೆ. ಬೆಂಗಳೂರಿನಲ್ಲಿ ೪೦ ಕೋಟಿ,೮೦ ಕೋಟಿ ಈಗ ೩೦೦ ಕೋಟಿಗೂ ಅಧಿಕ ಹಣ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಲಭ್ಯವಾಗಿದ್ದು, ಕಾಂಗ್ರೆಸ್‌ನ ಸಾಚತನ ಬಟಬಯಲಾಗಿದೆ. ಕೂಡಲೇ ಭ್ರಷ್ಟ ದೀರರಾಜ್ ಸಾಹುರವರು ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೆ ತಕ್ಷಣ ಅವರನ್ನು ಐಟಿ ಅಧಿಕಾರಿಗಳು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಕಾಂಗ್ರೆಸ್‌ಗೆ ಇದೇನು ಹೊಸದಲ್ಲ, ಅಧಿಕಾರ ಬಂದಾಗಿನಿಂದ ಎಲ್ಲ ಗುತ್ತಿಗೆದಾರರನ್ನು ಹಿಂಡಿಹಿಪ್ಪೆ ಮಾಡಿ ಕೋಟ್ಯಾಂತರ ರೂ. ಕಮಿಷನ್ ಪಡೆದಿರುವುದು ಬಹಿರಂಗವಾಗಿದೆ. ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.
ಭದ್ರಾವತಿಯ ಬಿಜೆಪಿ ನಾಯಕ ಗೋಕುಲ್ ಮೇಲೆ ಮಾರಾಣಂತಿಕ ಹಲ್ಲೆಯಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಸುಮೋಟ್ ಕೇಸ್ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಬಿಜೆಪಿ ಸತ್ತಿಲ್ಲ. ಜೀವಂತವಾಗಿದೆ.ಒತ್ತಡಕ್ಕೆ ಮಣಿದು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದರೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ.
ಅಲ್ಲದೆ ಈ ಹಲ್ಲೆಗೆ ಸಂಬಂಧಿಸಿದಂತೆ ಸದನದಲ್ಲೂ ಚರ್ಚಿಸುವ ಬಗ್ಗೆ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಪ್ರಮುಖರಾದ ಜ್ಯೋತಿ ಪ್ರಕಾಶ್, ಸಂತೋಷ್ ಬಳ್ಳಕೆರೆ, ರತ್ನಾಕರ್ ಶೆಣೈ, ಡಾ.ಧನಂಜಯ್ ಸರ್ಜಿ, ವಿನ್ಸೆಂಟ್ ರೋಡ್ರಿಗಸ್, ಈ. ವಿಶ್ವಾಸ್, ಶ್ರೀನಾಥ್, ಮಾಲತೇಶ್, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ರಶ್ಮಿ ಶ್ರೀನಿವಾಸ್, ದರ್ಶನ್ ಮತ್ತಿರರು ಇದ್ದರು.