ಶಿವಮೊಗ್ಗ, ಡಿ.11:
ಸಾಗರ ತಾಲೂಕು ಆನಂದಪುರಂನ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂಸ್ಥಾನ ಮಠ (ಬೆಕ್ಕಿನಕಲ್ಮಠ) ದ ಜಗದ್ಗುರು ಮುರುಘರಾಜೇಂದ್ರ ಕಂಚಿನ ರಥ ದೀಪೋತ್ಸವ ನಿಮಿತ್ತ ನಾಳೆ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ವಿದ್ಯುತ್ ಇಲಾಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರು ಹಾಗೂ ಶಿವಮೊಗ್ಗ ಮೆಸ್ಕಾಂನ ಅಧೀಕ್ಷಕ ಅಭಿಯಂತರರಾದ ಎಸ್. ಜಿ. ಶಶಿಧರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.


ಸಂಘದ ಹಾಗೂ ವೈಯಕ್ತಿಕವಾಗಿ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಶಶಿಧರ್ ಅವರು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಇಲಾಖೆಯ ವೀರಶೈವ ನೌಕರರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಹಮ್ಮಿಕೊಂಡಿರುವ ಜನೋಪಯೋಗಿ, ನೊಂದವರ ಆಸರೆಯ ಕಾರ್ಯಕ್ರಮಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯಶ್ರೀಗಳು ಹಾಗೂ ಜನಪ್ರತಿನಿಧಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಪರಿಚಯ
ಮೆಸ್ಕಾಂನ ಅಧೀಕ್ಷಕ ಅಭಿಯಂತರರಾದ ಎಸ್.ಜಿ. ಶಶಿಧರ್ ರವರು ದಿನಾಂಕ 21.07.1964 ರಲ್ಲಿ ಎಸ್. ಜಿ. ಗೋಣಪ್ಪ ಮತ್ತು ಶ್ರೀಮತಿ ಪಾರ್ವತಮ್ಮ ಇವರ 3ನೇ ಮಗನಾಗಿ ಕೃಷಿ ಕುಟುಂಬದಲ್ಲಿ ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು, ಆಲೇಕಲ್ ಗ್ರಾಮದಲ್ಲಿ ಜನಿಸಿದವರು.


ಪ್ರಾಥಮಿಕ ಶಿಕ್ಷಣವನ್ನು ಆಲೇಕಲ್ ಗ್ರಾಮದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ದಾವಣಗೆರೆಯಲ್ಲಿ, ಡಿಪ್ಲೋಮೋ ವ್ಯಾಸಂಗವನ್ನು ಹರಪನಹಳ್ಳಿಯಲ್ಲಿ ಹಾಗೂ ಬಿಇ ವಿದ್ಯಾಭ್ಯಾಸವನ್ನು ರಾಣೆಬೆನ್ನೂರಿನಲ್ಲಿ ಮುಗಿಸಿರುತ್ತಾರೆ.
ಮಾಸ್ಟರ್ ಡಿಗ್ರಿಗಾಗಿ ಕೊಲ್ಕತ್ತಾ ತೆರಳಿದ್ದ ಅವರು ಅದೇ ಸಮಯದಲ್ಲಿ ಅಂದಿನ ಕರ್ನಾಟಕ ವಿದ್ಯುತ್ ಮಂಡಳಿ ( ಕೆ.ಇ.ಬಿ.) ಇಲಾಖೆಯಲ್ಲಿ 02.02.1991 ರಲ್ಲಿ ಬೆಳಗಾಂ ಜಿಲ್ಲೆ, ರಾಯಭಾಗ ತಾಲೂಕಿನಲ್ಲಿ ಸಹಾಯಕ ಇಂಜಿನಿಯರ್ (AE) (ವಿ) ಆಗಿ ಸೇವೆಯನ್ನು ಪ್ರಾರಂಭಿಸಿರುತ್ತಾರೆ.
ವರ್ಗಾವಣೆ ಪಡೆದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ, ನಂತರ 2002ರಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ AEE (Ele) ಆಗಿ ಪದೋನ್ನತಿಯನ್ನು ಪಡೆದು ಶಿವಮೊಗ್ಗದಲ್ಲಿ ನಂತರ ಕಾರ್ಯನಿರ್ವಾಹಕ ಇಂಜಿನಿಯರ್ EE (Ele) ಆಗಿ ಪದೋನ್ನತಿ ಪಡೆದು ಮೆಸ್ಕಾಂ, ಶಿವಮೊಗ್ಗ ಹಾಗೂ ಸೆಸ್ಕಾಂ, ಮೈಸೂರಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಪ್ರಸ್ತುತ ಅಧೀಕ್ಷಕ ಇಂಜಿನಿಯರ್ (ವಿ) SEE (ele) ಆಗಿ ವೃತ್ತ ಕಚೇರಿ, ಮೆಸ್ಕಾಂ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ.


ಅವರಿಗೆ ಪತ್ನಿಯೊಂದಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ವಾಸಿಸುತ್ತಾ ತಮ್ಮ ಕರ್ತವ್ಯದ ಜೊತೆಗೆ ಸಂಘವನ್ನು ಮುನ್ನಡೆಸುತ್ತಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
2015ರಲ್ಲಿ ವಿದ್ಯುತ್ ಇಲಾಖೆಯಲ್ಲಿನ ಅವರೂ ಸೇರಿದಂತೆ ಒಂದಷ್ಟು ಸಮಾನ ಮನಸ್ಕ ಅಧಿಕಾರಿ ನೌಕರರು ಒಂದೆಡೆ ಸೇರಿ ಇಲಾಖೆಯಲ್ಲಿನ ಅಧಿಕಾರಿ ಮತ್ತು ನೌಕರರುಗಳ ಕ್ಷೇಮಾಭಿವೃದ್ಧಿ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮಗಳನ್ನು ತೊಡಗಿಸಿಕೊಳ್ಳುವ ಆಲೋಚನೆಯೊಂದಿಗೆ ಒಂದು ಸಂಘ ಕಟ್ಟುವ ನಿರ್ಧಾರ ಮಾಡಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಗಳ ಆಶೀರ್ವಾದ ಪಡೆದು ಬೆಕ್ಕಿನಕಲ್ಮಠ ಶಿವಮೊಗ್ಗ ಇಲ್ಲಿ ಸಭೆಗಳನ್ನು ನಡೆಸುವ ಮೂಲಕ ಎಲ್ಲಾ ಅಧಿಕಾರಿ ನೌಕರರ ಪ್ರೀತಿ ವಿಶ್ವಾಸ ಮತ್ತು ಸಹಾನುಮತದಿಂದ ಎಸ್.ಜಿ. ಶಶಿಧರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ದಿನಾಂಕ 25/6/2015 ರಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಲಾಯಿತು.
ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದ ನಮ್ಮ ಸಮಾಜದ ಎಲ್ಲಾ ಅಧಿಕಾರಿ ನೌಕರರನ್ನು ಸಂಘಕ್ಕೆ ಸದಸ್ಯತ್ವ ಪಡೆಯುವ ಮೂಲಕ ಕಾಯಕದ ಜೊತೆಗೆ ಸಮಾಜ ಸೇವೆಗಳನ್ನು ಈ ಕೆಳಕಂಡಂತೆ ನೆರವೇರಿಸಿಕೊಂಡು ಬರುತ್ತಿದೆ.

  1. ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಚೇತನ ಕುಮಾರಿ ಇಂದು ರವರಿಗೆ ₹ 1 ಲಕ್ಷ ಬೆಲೆಬಾಳುವ ಬ್ಯಾಟರಿ ಚಾಲಿತ ಮೋಟಾರ್ ವೀಲ್ ಚೇರ್ ಅನ್ನು ಕೊಡುಗೆಯಾಗಿ ನೀಡಲಾಗಿದೆ.
  2. ಶಿಕಾರಿಪುರದ ಶ್ರೀ ಮಾತೆ ಗಂಗಾಂಬಿಕೆ ಆಶ್ರಮಕ್ಕೆ ₹ 1 ಲಕ್ಷ ದೇಣಿಗೆ ನೀಡಲಾಗಿದೆ.
  3. ತರಳಬಾಳು ಬೃಹನ್ಮಠ ಸಿರಿಗೆರೆಯ ದಾಸೋಹ ಭವನಕ್ಕೆ ₹ 1 ಲಕ್ಷ ದೇಣಿಗೆ ನೀಡಲಾಗಿದೆ.
  4. ಕವಲೇದುರ್ಗ ಶ್ರೀಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 32 ಜನ ವಿದ್ಯಾರ್ಥಿಗಳಿಗೆ ₹ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿಗಳನ್ನು ನೀಡಲಾಗಿದೆ.
  5. ದಾವಣಗೆರೆ ಜಿಲ್ಲೆ, ಬಸವಪಟ್ಟಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಟ್ರಸ್ಟ್ ಮೂಲಕ ನಡೆಸುತ್ತಿರುವ ಶ್ರೀ ಸಿದ್ಧಾರೂಢ ವೃದ್ಧಾಶ್ರಮದ ಹಿರಿಯ ಚೇತನಗಳಿಗೆ ₹ 1 ಲಕ್ಷ ಮೌಲ್ಯದ ಮೂಲಭೂತ ಸೌಕರ್ಯಗಳ ಜೊತೆಗೆ 10 ಸಂಖ್ಯೆ ಹಾಸಿಗೆ ದಿಂಬುಗಳನ್ನು ಒಳಗೊಂಡಂತೆ ಪೀಠೋಪಕರಣಗಳನ್ನು.., 2 ವೀಲ್ ಚೇರ್ ಗಳನ್ನು ಮತ್ತು ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಉಪಕರಣಗಳನ್ನು ನೀಡಲಾಯಿತು. ನಂತರ ಅನ್ನದಾಸೋಹ ಸೇವೆಗೆ ₹ 25,000/- ಯನ್ನು ಕೂಡ ನೀಡಲಾಗಿದೆ.
  6. ಇಲಾಖೆಯ ಗುತ್ತಿಗೆ ನೌಕರರ ಮಗನಿಗೆ ಕಣ್ಣಿನ ದೃಷ್ಟಿ ದೋಷ ಇರುವುದರಿಂದ ₹ 20,000/- ಬೆಲೆಯ ವಿಶೇಷ ಕನ್ನಡಕ ಮತ್ತು ಬಸವ ಕೇಂದ್ರ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 20 ಮಕ್ಕಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಹೊಸವಸ್ತ್ರವನ್ನು ನೀಡಲಾಗಿದೆ.
  7. ಪ್ರತಿ ವರ್ಷವೂ ಕೂಡ ಸಂಘದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ, ಬೆಕ್ಕಿನಕಲ್ಮಠದಿಂದ ನಡೆಸಿಕೊಂಡು ಬರುತ್ತಿರುವ ಶ್ರಾವಣ ಚಿಂತನ ಕಾರ್ಯಕ್ರಮ, ಬಸವ ಕೇಂದ್ರ ಶಿವಮೊಗ್ಗದಿಂದ ನಡೆಸಿಕೊಂಡು ಬರುತ್ತಿರುವ ಚಿಂತನ ಕಾರ್ತಿಕ ಕಾರ್ಯಕ್ರಮದ ಒಂದು ದಿನದ ಸೇವಾರ್ಥಿಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
  8. ಶಿವಮೊಗ್ಗ, ಶಿರಾಳಕೊಪ್ಪ ಕೋಣಂದೂರು ಭಾಗದಲ್ಲಿ ನೇತ್ರದಾನ ಶಿಬಿರ, ರಕ್ತದಾನ ಶಿಬಿರಗಳನ್ನು ಸಂಘದ ವತಿಯಿಂದ ಹಮ್ಮಿಕೊಂಡಿರುತ್ತಾರೆ.
  9. ಸಂಘದ ವತಿಯಿಂದ ಸಮಾಜದ ಗಣ್ಯರಿಗೆ ಸಾಧಕರಿಗೆ ನಿವೃತ್ತಿ ಹೊಂದಿರುವ ಅಧಿಕಾರಿ ನೌಕರರಿಗೆ ಸತ್ಕರಿಸಿ ಸನ್ಮಾನಿಸಿ ಗೌರವ ನೀಡಲಾಗುತ್ತಿದೆ.
  10. ಹಲವಾರು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಕೂಡ ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ.
  11. ಸಂಘದ ಅಧಿಕಾರಿ ನೌಕರರಿಗೆ ಅನುಕೂಲವಾಗಲೆಂದು ” ಕಾಯಕ ಜ್ಯೋತಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ” ಸೊಸೈಟಿಯನ್ನು ಕೂಡ ತೆರೆದು ಉತ್ತಮ ಮಟ್ಟದಲ್ಲಿ ಸಾಲ ಸೌಲಭ್ಯ ಜೊತೆಯಲ್ಲಿ ಠೇವಣಿಗಳನ್ನು ಇರಿಸಿಕೊಳ್ಳುತ್ತಾ ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ.
  12. ಪ್ರತಿ ವರ್ಷವೂ ಸಹ ಸಂಘದ ಎಲ್ಲಾ ಸದಸ್ಯರಿಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸವನ್ನು ಏರ್ಪಡಿಸಲಾಗುತ್ತಿದೆ.
  13. ಸಂಘದ ಕಾರ್ಯ ಚಟುವಟಿಕೆಗಳನ್ನು ಹೊಂದಿರುವ ಮತ್ತು ಪೂಜ್ಯ ಗುರುಗಳ ಶುಭ ಸಂದೇಶ ಮತ್ತು ಆಶೀರ್ವಾದ ಹಾಗೂ ವಿಶೇಷ ಅಂಕಣಗಳನ್ನು ಒಳಗೊಂಡಂತೆ ಕಾಯಕ ಜ್ಯೋತಿ ಸಂಚಿಕೆಯನ್ನು ಸಹ ಪ್ರತಿ ವರ್ಷ ಬಿಡುಗಡೆ ಮಾಡಿ ಮಾಡಲಾಗುತ್ತಿದೆ.
  14. ಸಂಘದ ಪ್ರತಿ ಸದಸ್ಯರಿಗೆ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಪತ್ರಗಳ ಮೂಲಕ ಶುಭ ಹಾರೈಸಲಾಗುತ್ತಿದೆ.
  15. ಪ್ರತಿ ವರ್ಷವೂ ಕೂಡ ಉತ್ತಮ ಗುಣಮಟ್ಟದ ಹಾಗೂ ವಿಶೇಷ ವಿಶೇಷತೆಗಳನ್ನು ಒಳಗೊಂಡಂತೆ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡುವುದರ ಜೊತೆಗೆ ಸಂಘದ ಸದಸ್ಯರಿಗೂ ಕೂಡ ವಿತರಿಸಲಾಗುತ್ತಿದೆ.
  16. ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿ ವಿದ್ಯುತ್ ಅಪಘಾತದಲ್ಲಿ ಲಿಂಗೈಕ್ಯರಾದ ಶ್ರೀಯುತ ಶರಣ ಲಿಂಗೈಕ್ಯ ಶರಣ ಹಾಲಸ್ವಾಮಿ ಅವರ ಮಾತೃಶ್ರೀ ಯವರಿಗೆ ₹ 1 ಲಕ್ಷ ಮೌಲ್ಯದ ಡಿ.ಡಿ. ನೀಡಲಾಗಿದೆ.
    ಇಷ್ಟೇ ಅಲ್ಲದೇ ಎಸ್. ಜಿ. ಶಶಿಧರ್ ಅವರ ಕನಸಿನಂತೆ ಅವರ ಅಧ್ಯಕ್ಷತೆಯಲ್ಲಿ ಸಂಘವು ಮತ್ತೊಂದು ಮಹತ್ತರ ಸೇವೆಗೆ ಮುಂದಾಗುತ್ತಿದೆ. ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಂಘವು ತನ್ನ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡು ಆ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡುವಂತಹ ಬಡ ವಿದ್ಯಾರ್ಥಿಗಳಿಗೆ ಉಚಿತ ವಾಸ್ತವ್ಯ ನೀಡುವುದು ಮತ್ತು ಸಮಾಜ ಸೇವೆಗೆ ಸಹಕಾರಿ ಆಗುವಂತಹ ಕಟ್ಟಡವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರದ ಹೊನ್ನಾಳಿ ರಸ್ತೆಯಲ್ಲಿ ತೇವರಚಟ್ನಲ್ಲಿ ಯಲ್ಲಿ ಸೂಡಾ ನಿವೇಶನವನ್ನು ಪಡೆದು ( ” ಸಂಸ್ಕೃತಿ ಭವನ ” ) ಕಟ್ಟಡದ ನೀಲಿ ನಕ್ಷೆಯನ್ನು ತಯಾರಿಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಿದೆ.
    ಇಂತಹ ಹತ್ತು ಹಲವು ಪ್ರಮುಖ ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಅರ್ಥಪೂರ್ಣ ವ್ಯಕ್ತಿಗೆ ಬೆಕ್ಕಿನ ಕಲ್ಮಠ ಗೌರವಿಸುತ್ತಿರುವುದು ನಿಜಕ್ಕೂ ಗಮನಾರ್ಹ ಹಾಗೂ ಶ್ಲಾಘನೀಯವಾದದು.

By admin

ನಿಮ್ಮದೊಂದು ಉತ್ತರ

You missed

error: Content is protected !!