ಶಿವಮೊಗ್ಗ: ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ನಾಯಕತ್ವ) ಇಂದು ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ ಬರಗಾಲವಿದೆ. ಬರಗಾಲ ಘೋಷಣೆಯೂ ಆಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಬರ ಪರಿಹಾರ ನೀಡಲು ವಿಳಂಬ ಮಾಡುತ್ತಿದೆ. ಇಷ್ಟರಲ್ಲಾಗಲೇ ಬರ ಪರಿಹಾರ ಕ್ರಮಗಳನ್ನು ಜರುಗಿಸಬೇಕಿತ್ತು. ಕುಡಿಯುವ ನೀರಿಗೂ ತೊಂದರೆಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ಹೇಳಿ ಜವಾಬ್ದಾರಿ ಮರೆತಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ರೈತವಿರೋಧಿ ಹೊಸ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಗೀಕರಣ ಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ೭ ಗಂಟೆ ವಿದ್ಯುತ್ ನೀಡಬೇಕು. ಡಾ. ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಕನಿಷ್ಠ ಬೆಂಬಲ ಬೆಲೆ ಕಾಯಿದೆಯನ್ನು ಜಾರಿಗೆ ತರಬೇಕು. ಭದ್ರಾ ಮೇಲ್ದಂಡೆ ಯೋಜನೆ
ತ್ವರಿತವಾಗಿ ಮುಗಿಸಬೇಕು. ರೈತರ ಎಲ್ಲಾ ರೀತಿಯ ಸಾಗುವಳಿ ಜಮೀನುಗಳಿಗೆ ಹಕ್ಕುಪತ್ರ ನೀಡಬೇಕು ರೈತರ ಸಾಲ ಮನ್ನಾ ಮಾಡಬೇಕು. ರೈತರ ರಕ್ಷಣೆಗೆ ಸರ್ಕಾರಗಳು ಧಾವಿಸಬೇಕು.
ಸಾಲ ವಸೂಲಾತಿ ನಿಲ್ಲಬೇಕು. ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ಪದಾಧಿಕಾರಿಗಳಾದ ಯಶವಂತ ರಾವ್ ಘೋರ್ಪಡೆ, ಈರಣ್ಯ ಪ್ಯಾಟಿ, ಹಾಲೇಶಪ್ಪ ಗೌಡರು, ಮಂಜುನಾಥ್ ಹೆಚ್.ಎಸ್., ಷಡಾಕ್ಷರಪ್ಪ, ಕೆ. ಆರ್. ಮಂಜುನಾಥ್, ಜಗದೀಶ್ ಮತ್ತಿತರರಿದ್ದರು.