ಸಾಗರ : ಇತಿಹಾಸ ಪ್ರಸಿದ್ದವಾದ ಗಣಪತಿ ಕೆರೆ ಅಭಿವೃದ್ದಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದ್ದು, ಇದನ್ನು ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆ ಸಚಿವರು ಚಿಂತನೆ ನಡೆಸಿದ್ದಾರೆ. ಕೆರೆ ಅಭಿವೃದ್ದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಸಾರ್ವಜನಿಕರು ಸಚಿವರಿಗೆ ಪತ್ರ ಬರೆದಿದ್ದಾರೆ ಎಂದರು.


ಇಲ್ಲಿನ ಗಣಪತಿ ಕೆರೆ, ಸಣ್ಣಮನೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗಣಪತಿ ಕೆರೆಯನ್ನು ಪುನರ್ ಸರ್ವೇ ಮಾಡಿಸುವತ್ತ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.


ರಾಷ್ಟ್ರೀಯ ಹೆದ್ದಾರಿ ೨೦೬ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿಪಡಿಸುವ ಯೋಜನೆಗೆ ಸುಮಾರು ೪೪ ಕೋಟಿ ರೂ. ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆಯಡಿ ಸಣ್ಣಮನೆ ಸೇತುವೆಯನ್ನು ಅಭಿವೃದ್ದಿಪಡಿಸುವ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯರು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದು ಶೀಘ್ರದಲ್ಲಿಯೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಹಿಂದಿನ ಶಾಸಕರು ತಮ್ಮ ಗೂಂಡಾಗಳ ಮೂಲಕ ಭೂಸ್ವಾಧೀನಕ್ಕೆ ಮುಂದಾಗಿದ್ದರು. ನಾನು ಸ್ನೇಹದಿಂದ ಅವರ ಬಳಿ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಕೋರಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.


೩ಕೋಟಿ ರೂ. ವೆಚ್ಚದಲ್ಲಿ ಬೈಪಾಸ್ ನಿರ್ಮಾಣ, ಎಪಿಎಂಸಿ ಪ್ರಾಂಗಣ ಅಭಿವೃದ್ದಿಗೆ ೧.೩೩ ಕೋಟಿ ರೂ., ಗ್ರಾಮಾಂತರ ಶಾಲೆಗಳಿಗೆ ಪೀಠೋಪಕರಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ೧.೯೯ ಕೋಟಿ ರೂ. ಅನುದಾನ ಮಂಜೂರಾಗಿದೆ. ಸಾಗರ ಅಗ್ರಹಾರದಿಂದ ಹೊಸನಗರವರೆಗೆ ರಸ್ತೆ ಅಗಲೀಕರಣ, ಸಾಗರ ನಗರದ ಕೆಳದಿ ರಾಣಿ ಚೆನ್ನಮ್ಮ ವೃತ್ತದಿಂದ ಶ್ರೀಗಂಧ ಕಾಂಪ್ಲೆಕ್ಸ್‌ವರೆಗೆ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.


ನುಡಿದಂತೆ ನಡೆದ ಸರ್ಕಾರ : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ರಾಜ್ಯದಲ್ಲಿ ವಿವಿಧ ಯೋಜನೆಗಳಿಗಾಗಿ ಸರ್ಕಾರ ೩೨ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಆರಂಭದಲ್ಲಿ ಸ್ವಲ್ಪ ಅಭಿವೃದ್ದಿ ಹಿನ್ನೆಡೆ ಉಂಟಾಗಿದ್ದರೂ ಈಗ ಸರ್ಕಾರ ಅಭಿವೃದ್ದಿ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಸಾಗರಕ್ಕೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.


ಬೇಳೂರಿಗೆ ಅಡ್ಡಿ ಮಾಡಿದರೆ ಸಹಿಸಲ್ಲ : ನಾನು ಮೂರು ಬಾರಿ ಶಾಸಕನಾಗಿದ್ದು, ಓರ್ವ ಹಿರಿಯ ಶಾಸಕನಾಗಿದ್ದೇನೆ. ನನ್ನ ಅಭಿವೃದ್ದಿ ವೇಗಕ್ಕೆ ಅಡ್ಡಗಾಲು ಹಾಕಲು ಯಾರೇ ಪ್ರಯತ್ನ ಪಟ್ಟರೂ ಸಹಿಸಿಕೊಳ್ಳುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ದಿ ವಿಷಯದಲ್ಲಿ ನನ್ನನ್ನು ಕಡೆಗಣಿಸುತ್ತಿದ್ದಾರೆ. ಇದರ ಬಗ್ಗೆ ನನ್ನ ವಿರೋಧವಿದೆಯೆ ವಿನಃ, ವೈಯಕ್ತಿಕ ದ್ವೇಷ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನನಗೆ ಟಿಕೇಟ್ ಕೊಡುವ ಅವಧಿಯಲ್ಲಿ ಪಕ್ಷವನ್ನು ಬಿಟ್ಟು ಹೋಗಿರುವ ಯಾರೇ ಆದರೂ ಕಾಂಗ್ರೇಸ್‌ಗೆ ಬರುವ ಅಗತ್ಯವಿಲ್ಲ. ಇನ್ನುಳಿದಂತೆ ಪಕ್ಷದ ತತ್ವಸಿದ್ದಾಂತವನ್ನು ಒಪ್ಪಿ ಬರುವವರಿಗೆ ಕಾಂಗ್ರೇಸ್ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣಪತಿ ಮಂಡಗಳಲೆ, ಸುರೇಶಬಾಬು, ರೇಖಾ, ರಮೇಶ್, ಲಿಂಗರಾಜ್ ಆರೋಡಿ, ಆಟೋ ದಿನೇಶ್, ರವಿಕುಮಾರ್ ವೈ.ಕೆ. ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!