ಶಿವಮೊಗ್ಗ: ಗದ್ದಲ, ಕಿತ್ತಾಟ, ಅರಚುವುದು, ಕಿರುಚುವುದು, ಕರ್ಕಶ ಕೂಗಾಟಗಳ ಮಧ್ಯೆ ಇಂದು ಮಹಾನಗರ ಪಾಲಿಕೆಯ ಐದು ವರ್ಷದ ಆಡಳಿತದ ಕೊನೆಯ ಸಾಮಾನ್ಯ ಸಭೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕಿ ಮೆಹಕ್ ಷರೀಫ್ ಅವರು, ಎಲ್ಲರಿಗೂ ಅಭಿನಂದನೆ ಸಲ್ಲಿಸಿ ನಂತರ ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಕೂಗಾಡಲು ಆರಂಭಿಸಿದರು. ವಿರೋಧ ಪಕ್ಷದ ಸದಸ್ಯರು ಕೂಡ ಕೂಗಾಟ ನಡೆಸಿದರು. ಇಬ್ಬರ ಗದ್ದಲದ ಗಲಾಟೆಯ ನಡುವೆ ಯಾರು, ಏನು ಮಾತನಾಡುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುವಂತಿರಲಿಲ್ಲ. ಅದರಲ್ಲೂ ಕೆಲ ಮಹಿಳಾ ಸದಸ್ಯರ ಅರಚಾಟವಂತೂ ಅತ್ಯಂತ ಕರ್ಕಶವಾಗಿ ಕೇಳಿಬರುತ್ತಿತ್ತು.
ಒಂದು ಕೊನೆಯ ಪಾಲಿಕೆಯ ಸಾಮಾನ್ಯ ಸಭೆ ಅಭಿವೃದ್ಧಿ ಏನಾಗಿದೆ, ಏನಾಗಬೇಕಿತ್ತು, ಪಾಲಿಕೆ ಬಗ್ಗೆ ಸಾರ್ವಜನಿಕರ ವಿಶ್ವಾಸಗಳೇನು, ನಾವೇನು ಸಾಧನೆ ಮಾಡಿದ್ಧೇವೆ ಎಂದು ಅತ್ಯಂತ ವಿನಮ್ರವಾಗಿ ಗದ್ದಲವಿಲ್ಲದೆ ಕೊನೆಗೊಳಿಸಬಹುದಿತ್ತು. ಆದರೆ ಸಭೆ ಹಾಗಾಗದೆ ದಿಕ್ಕು ತಪ್ಪಿ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಜಗಳವಾಗಿ ರಾಜಕಾರಣದ ವಿಷಯಗಳು ತಳಕು ಹಾಕಿಕೊಂಡು ಸಭೆಯ ದಾರಿಯನ್ನೇ ದಿಕ್ಕುತಪ್ಪಿಸಿದ್ದವು.
ಕಾಂಗ್ರೆಸ್ ಪಕ್ಷದ ಸದಸ್ಯರಾದ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೀಶ್,ನಾಗರಾಜ್ ಕಂಕಾರಿ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಸೇರಿದಂತೆ ಕಾಂಗ್ರೆಸ್ ಸದಸ್ಯರು ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ. ಅನುದಾನ ನೀಡುವಲ್ಲಿ, ಕಾಮಗಾರಿ ಪೂರ್ಣ ಮಾಡುವಲ್ಲಿ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲಿ ಕಾಮಗಾರಿಗಳೇ ಆಗಿಲ್ಲ. ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಆಡಳಿತ ಪಕ್ಷದ ಸದಸ್ಯರು ಎಲ್ಲಾ ವಾರ್ಡುಗಳಲ್ಲಿ ಕೆಲಸವಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಅನುದಾನ ಸಿಕ್ಕಿದೆ. ಈಗ ಕಾಂಗ್ರೆಸ್ ಸರ್ಕಾರವೇ ಇದೆ. ಆದರು ಅನುದಾನ ಬರಲಿಲ್ಲ. ಪಾಲಿಕೆ ದಿವಾಳಿಯಾಗಿಲ್ಲ. ಸರ್ಕಾರವೇ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಸದಸ್ಯರಾದ ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಇ. ವಿಶ್ವಾಸ್, ಶಂಕರ್ ಗನ್ನಿ ಸೇರಿದಂತೆ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಹೇಳಿಕೆಗಳನ್ನು ಬಲವಾಗಿ ಖಂಡಿಸಿದರು. ಎರಡೂ ಪಕ್ಷಗಳ ನಡುವೆ ಮೇಯರ್ ಉತ್ತರ ಹೇಳಲು ಸಾಧ್ಯವಾಗಲೇ ಇಲ್ಲ. ಆಯುಕ್ತರು ಕೂಡ ಮೌನಕ್ಕೆ ಜಾರಿದ್ದರು.
ಈ ಹಂತದಲ್ಲಿ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ಇತ್ತೀಚೆಗೆ ಶಾಂತಿನಗರದಲ್ಲಿ ಆದ ಗಲಾಟೆಗೆ ಸಂಬಂಧಿಸಿದಂತೆ ಹಲವು ಮನೆಗಳು ಧ್ವಂಸವಾಗಿವೆ. ಸುಮಾರು ೩ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪಾಲಿಕೆ ವತಿಯಿಂದ ಸಂತ್ರಸ್ತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ ಸದಸ್ಯರು ಸಹಮತ ವ್ಯಕ್ತಪಡಿಸಿ ಪರಿಹಾರ ನೀಡುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ನಿಮ್ಮದೇ ಸರ್ಕಾರವಿದೆ. ಸರ್ಕಾರಕ್ಕೆ ಮನವಿ ಮಾಡೋಣ. ಸರ್ಕಾರವೇ ಕೊಡಲಿ ಎಂದರು.
ಈ ಮಧ್ಯೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಯಾವುದೇ ಗಲಭೆ ಸಂದರ್ಭದಲ್ಲಿ ಆದ ನಷ್ಟಕ್ಕೆ ಪರಿಹಾರ ನೀಡಬೇಕು ಎಂದರೆ ಕಾಯಿದೆಯ ಪ್ರಕಾರ ಪಾಲಿಕೆಗೆ ಅವಕಾಶವಿಲ್ಲ. ನಷ್ಟವನ್ನು ಅಂದಾಜಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಸರ್ಕಾರವೇ ಪರಿಹಾರ ನೀಡುತ್ತದೆ ಎಂದರು.
ಇದಕ್ಕೆ ಉತ್ತರ ನೀಡಿದ ಕಾಂಗ್ರೆಸ್ ಸದಸ್ಯರಾದ ಯೋಗೇಶ್ ಮತ್ತು ನಾಗರಾಜ ಕಂಕಾರಿ ಹಾಗೇನೂ ಇಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ಘಟನೆಗಳಾಗಿವೆ. ನಾವೇನೂ ಯಾವ ಸರ್ಕಾರಕ್ಕೂ ಕೇಳಿಲ್ಲ. ಪಾಲಿಕೆಯಿಂದಲೇ ಪರಿಹಾರ ನೀಡಿದ್ದೇವೆ. ಬೇಕಾದರೆ ಕಡತಗಳನ್ನು ಪರಿಶೀಲಿಸಿ. ಹಾಗಾಗಿ ಸರ್ಕಾರಕ್ಕೆ ಕೇಳಬೇಕಾದ ಅವಶ್ಯಕತೆ ಇಲ್ಲ. ಅಷ್ಟೊಂದು ದಿವಾಳಿಯಾಗಿದೆಯೇ ಪಾಲಿಕೆ ಎಂದು ಕುಟುಕಿದರು.
ಆಯುಕ್ತ ಮಾಯಣ್ಣ ಗೌಡ ಪಾಲಿಕೆ ಆರ್ಥಿಕವಾಗಿ ಸದೃಢವಾಗಿದೆ ಎಂದು ಘೋಷಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರೆ, ವಿರೋಧ ಪಕ್ಷದವರು ಇದನ್ನು ಬಲವಾಗಿ ಖಂಡಿಸಿದರು. ಯಾವ ಅಭಿವೃದ್ಧಿಯಾಗಿದೆ. ಯಾವುದಕ್ಕೆ ಹಣ ನೀಡಿದ್ದಾರೆ, ಆಯುಕ್ತರಿಗೆ ಲೆಕ್ಕ ಗೊತ್ತಿದೆಯೇ ಎಂದು ತರಾಟೆ ತೆಗೆದುಕೊಂಡರು. ಆಡಳಿತ ಪಕ್ಷದ ಸದಸ್ಯರು ರಾಗಿಗುಡ್ಡ ಘಟನೆಯನ್ನು ರಾಜಕಾರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರ ಪ್ರವೇಶ: ಈ ಮಧ್ಯೆ ಶಾಸಕ ಎಸ್.ಎನ್. ಚನ್ನಬಸಪ್ಪ ತಡವಾಗಿ ಪಾಲಿಕೆಗೆ ಬಂದಾಗ ರಾಗಿಗುಡ್ಡ ಘಟನೆಯ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ಮಾತುಗಳು ತಾರಕಕ್ಕೇರುತ್ತಿದ್ದವು. ಆಗ ಮಾತನಾಡಿದ ಶಾಸಕರು, ಒಳ್ಳೆ ಚರ್ಚೆ ನಡೆಯುತ್ತಿದೆ. ಯಾವ ಹಿಂದೂ ಮನೆಗಳಿಗೆ ಹಾನಿಯಾಗಿದೆಯೋ ಅವರಿಗೆಲ್ಲಾ ಪರಿಹಾರ ಪಾಲಿಕೆಯಿಂದಲೇ ನೀಡಲಿ ಎಂದರು.
ಶಾಸಕರ ಈ ಮಾತಿಗೆ ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಶಾಸಕರಿಗೆ ಸಂವಿಧಾನದ ಪ್ರಜ್ಞೆ ಇರಲಿ. ಕೇವಲ ಹಿಂದೂ ಮನೆಗಳಿಗೆ ಎಂಬ ಅವರ ಹೇಳಿಕೆ ಖಂಡನೀಯ.ಗಲಾಟೆಯಲ್ಲಿ ಹಾನಿಗೊಳಗಾದ ಎಲ್ಲಾ ಮನೆಗಳಿಗೂ ಪರಿಹಾರ ನೀಡಲಿ. ಆದರೆ ಶಾಸಕರು ಕೇವಲ ಹಿಂದೂ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ, ಒಬ್ಬ ಶಾಸಕರಾಗಿ ಇವರ ಹೇಳಿಕೆ ಸಂವಿಧಾನ ವಿರೋಧವಾದದ್ದು ತಕ್ಷಣ ಇದನ್ನು ವಾಪಾಸು ತೆಗೆದುಕೊಳ್ಳಬೇಕು ಎಂದರು.
ಆದರೆ ಇದನ್ನು ಒಪ್ಪದ ಶಾಸಕರು ಅಲ್ಲಿ ಕೇವಲ ಹಿಂದೂ ಮನೆಗಳಿಗೆ ಮಾತ್ರ ಹಾನಿಯಾಗಿದೆ. ಹಿಂದೂಗಳನ್ನು ಗುರಿಯಾಗಿಟ್ಟುಕೊಂಡೇ ಈ ಗಲಾಟೆ ಎಬ್ಬಿಸಲಾಗಿದೆ. ಇದಕ್ಕೆ ಪರಿಹಾರವನ್ನು ಪಾಲಿಕೆಯೇ ನೀಡಲಿ. ಏಕೆಂದರೆ ಸರ್ಕಾರ ಸತ್ತುಹೋಗಿದೆ ಎಂದು ಟೀಕಿಸಿದರು.
ಇದರಿಂದ ಮತ್ತಷ್ಟು ಕೆರಳಿದ ಕಾಂಗ್ರೆಸ್ ಸದಸ್ಯರು ಸರ್ಕಾರ ಸತ್ತಿಲ್ಲ. ಪಾಲಿಕೆ ಸತ್ತಿದೆ. ಸರ್ಕಾರದ ಎಲ್ಲಾ ಭಾಗ್ಯಗಳು ಜನರನ್ನು ತಲುಪುತ್ತಿವೆ. ಸದೃಢವಾಗಿದೆ. ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ೫೦೦ರ ನಾಲ್ಕು ನೋಟುಗಳನ್ನು ಕೂಡ ಸಭೆಗೆ ಪ್ರದರ್ಶಿಸಿದರು.
ಇದರ ನಡುವೆ ಮೇಹಕ್ ಷರೀಪ್ ಮಾತನಾಡಿ, ನಾನು ಶ್ರೀರಾಮ ನಗರದ ಸದಸ್ಯೆ. ಆದರೆ ಇಲ್ಲಿ ಶ್ರೀರಾಮನನ್ನೇ ಮರೆಯಲಾಗಿದೆ. ರಾಮನ ಹೆಸರಿಗೆ ಮಸಿ ಬಳಿಯಲಾಗಿದೆ ಎಂದರು. ಈ ಮಾತನ್ನನು ಸ್ವಾಗತಿಸಿದ ಕಾಂಗ್ರೆಸ್ ಸದಸ್ಯರು ಹೌದು, ರಾಮನಿಗೆ ಅನ್ಯಾಯವಾಗಿದೆ. ಶ್ರೀರಾಮ, ಲವ-ಕುಶ, ಆಂಜನೇಯ ಅವರ ಹೆಸರಿನಲ್ಲಿದ್ದ ಪಾಲಿಕೆಯ ಎಲ್ಲಾ ಯೋಜನೆಗಳು ವಿಫಲವಾಗಿವೆ ಎಂದು ಕುಟುಕಿದರು.
ಸದಸ್ಯೆ ರೇಖಾ ರಂಗನಾಥ್ ಮಾತನಾಡಿ, ಪ್ರಧಾನ ಮಂತ್ರಿ ಮೋದಿಯವರ ಯೋಜನೆಯಡಿಯಲ್ಲಿ ಯಾವ ಮನೆಗಳೂ ನಿರ್ಮಾಣವಾಗಿಲ್ಲ. ಕೇವಲ ೩೦೦ ಮನೆಗಳು ಮಾತ್ರ ಅಭಿವೃದ್ಧಿಯಲ್ಲಿವೆ ಎನ್ನುತ್ತಿದ್ದಂತೆಯೇ ಮೇಯರ್ ಶಿವಕುಮಾರ್ ಅವರು ೧೩೦೦ ಮನೆಗಳು ರೆಡಿಯಾಗಿವೆ ಎಂದರು. ರಮೇಶ್ ಹೆಗ್ಡೆ ಮಾತನಾಡಿ, ೧೩೦೦ ಮನೆಗಳು ಅಲ್ಲ, ದಾಖಲೆ ತೋರಿಸಲಿ. ಮೋದಿ ಹೆಸರಿನ ಯೋಜನೆಯು ವಿಫಲವಾಗಿದೆ ಎಂದರು.
ಒಟ್ಟಾರೆ ಕೊನೆಯ ಸಭೆಯ ಕೂಡ ಅತ್ಯುತ್ತಮ ಚರ್ಚೆಗೆ ಒಳಗಾಗದೆ ಗಲಾಟೆಗಳಲ್ಲಿಯೇ ಮುಗಿಯಿತು. ಶಾಸಕರು ಕೂಡ ಸಭೆಯಲ್ಲಿ ಹೆಚ್ಚು ಹೊತ್ತು ಇಲ್ಲದೆ ಹೊರತೆರಳಿದರು. ಮಾಧ್ಯಮದವರು ಸಭೆಯಲ್ಲಿ ಇರುವ ತನಕ ಈ ಗಲಾಟೆ, ಗೊಂದಲ ಮುಂದುವರಿಯುತ್ತಲೇ ಇತ್ತು.
ಸಭೆಯಲ್ಲಿ ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಹಾಗೂ ಅಧಿಕಾರಿಗಳು ಇದ್ದರು.